ಮಂಗಳೂರು: ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ, ತನ್ನ ಬಳಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ 22 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾಗಿರುವ 40 ವರ್ಷದ ಮುಸ್ಲಿಂ ಧರ್ಮಗುರುವೊಬ್ಬರ ಪ್ರಕರಣ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಮಂಗಳೂರಿನ ಅಸೈಗೋಳಿ ನಿವಾಸಿ ಧರ್ಮಗುರು ಅಶ್ರಫ್ ಸ ಅದಿ ಹಾಗೂ ಕುಮಟಾದ ಬೆಟಗುಳಿಯ ಯುವತಿ ಮಗದುಮ್ಮ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅಕ್ಟೋಬರ್ 22ರಂದು ಕುಮಟಾಗೆ ಬಂದಿದ್ದ ಅಶ್ರಫ್ ಯುವತಿಯನ್ನು ಮಂಗಳೂರಿಗೆ ಕರೆತಂದು ನಿಖಾ ಮಾಡಿಕೊಂಡು ಮದುವೆ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮಗಳು ಕಾಣೆಯಾಗಿರುವುದಾಗಿ ಪೋಷಕರು ಕೊಣಾಜೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಯುವತಿ ತಾನು ವಯಸ್ಕಳಾಗಿದ್ದು, ಧರ್ಮಗುರುವಿನ ಜೊತೆಯೇ ಇರುವುದಾಗಿ ತಿಳಿಸಿ ಪೋಷಕರೊಂದಿಗೆ ತೆರಳಲು ನಿರಾಕರಿಸಿದ್ದಾಳೆ.
ಧರ್ಮಗುರುವಿಗೆ ಈಗಾಗಲೇ ಪತ್ನಿ ಹಾಗೂ ಮಕ್ಕಳಿದ್ದು, ಈ ವಿಚಾರವನ್ನು ಮುಚ್ಚಿಟ್ಟು ಮದುವೆಯಾಗಿದ್ದಾರೆ ಎಂಬುದು ಯುವತಿಯ ಪೋಷಕರ ಆರೋಪವಾಗಿದೆ. ಘಟನೆಯಿಂದ ಅಸಮಾಧಾನಗೊಂಡಿರುವ ಸಮುದಾಯದ ಕೆಲವು ಮುಖಂಡರು ಧರ್ಮಗುರುವಿನ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

























