ಮಂಗಳೂರು: ಜಪ್ಪಿನಮೊಗರಿನಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ಬಸ್ ಅನ್ನು ಮಂಗಳೂರು ಸಂಚಾರ ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಅ.22ರಂದು ರಾತ್ರಿ ಸುಮಾರು 7.50ಕ್ಕೆ ಜಪ್ಪಿನಮೊಗರು ಎ.ಕೆ. ಲಾಡ್ಜ್ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮಹಾಕಾಳಿ ಪಡ್ಪು ಕಡೆಗೆ ಹೋಗುವ ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 30ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕನಿಗೆ KA-19-AA-8499 ನೋಂದಣಿ ಸಂಖ್ಯೆಯ ಬಸ್ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ರಸ್ತೆಯ ಬದಿಗೆ ಬಿದ್ದ ಯುವಕನ ತಲೆಗೆ ತೀವ್ರ ಗಾಯವಾಗಿತ್ತು.
ಸ್ಥಳೀಯರು ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ಅಪಘಾತದ ಬಳಿಕ ಬಸ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿತ್ತು.
ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, 42ನೇ ರೂಟ್ನಲ್ಲಿ ಸಂಚರಿಸುವ ‘ಶ್ರೀ ಕಟೀಲ್’ ಹೆಸರಿನ ಬಸ್ ಅಪಘಾತಕ್ಕೆ ಕಾರಣವಾಗಿರುವುದು ಪತ್ತೆಯಾಗಿದೆ. ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಹಾಗೂ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಕಾಸರಗೋಡು ನಿವಾಸಿ ಸುಂದರ ಅವರ ಪುತ್ರ ಸುಧೀರ್ ಕೆ. (40) ಬಸ್ ಚಾಲನೆ ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಚಾಲಕನ ಚಾಲನಾ ಪರವಾನಗಿ ಚಾಲ್ತಿಯಲ್ಲಿರುವುದೂ ಪರಿಶೀಲನೆಯಲ್ಲಿ ಕಂಡುಬಂದಿದೆ.
ಪ್ರಕರಣದ ಮುಂದಿನ ತನಿಖೆಯಲ್ಲಿ ಚಾಲಕ ಮತ್ತು ಬಸ್ನಲ್ಲಿದ್ದ ಪ್ರಯಾಣಿಕರ ಮೊಬೈಲ್ ಲೊಕೇಶನ್ ವಿವರಗಳು ಸೇರಿದಂತೆ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


























