ಪುತ್ತೂರು: ಬಂಟ್ವಾಳ ತಾಲೂಕಿನ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಅಧ್ಯಕ್ಷ ಪದ್ಮನಾಭ ಭಟ್ ನೀಡಿದ ದೂರಿನ ಮೇರೆಗೆ, ಸಂಘದ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಹಾಗೂ ಮಂಗಳೂರಿನ ಕದ್ರಿ ನಿವಾಸಿ ಸಮೀರಾ ರಿಯಾಝ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಅ.ಕ್ರ. 130/2026ರಲ್ಲಿ ಬಿಎನ್ಎಸ್ ಕಲಂ 316(5), 318(4), 336(3), 340(2) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
31.21 ಕೋಟಿ ರೂ. ಠೇವಣಿ ಹಣದಲ್ಲಿ ಅವ್ಯವಹಾರದ ಆರೋಪ
ದೂರಿನ ಪ್ರಕಾರ, 2024ರಿಂದ 2026ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾದ ಸುಮಾರು 31,21,84,321 ರೂ. ಠೇವಣಿ ಹಣಕ್ಕೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ.
2025-26ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಸುಮಾರು 6.86 ಕೋಟಿ ರೂ. ಹಾಗೂ 7.26 ಲಕ್ಷ ರೂ.ಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಲಾಗಿದೆ ಎಂಬ ಆರೋಪವಿದೆ. ಮತ್ತೊಂದು ಪ್ರಕರಣದಲ್ಲಿ 1.67 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, 12 ಮಂದಿಗೆ ನಿಯಮಬಾಹಿರವಾಗಿ ಸಾಲ ಮಂಜೂರು ಮಾಡಿರುವುದು ಹಾಗೂ ಸಹಕಾರಿ ಸಂಘದ ಆಡಳಿತ ಮಂಡಳಿಯ ಅನುಮತಿಯಿಲ್ಲದೆ ಸಾಫ್ಟ್ವೇರ್ನಲ್ಲಿನ ದಾಖಲೆಗಳನ್ನು ತಿದ್ದುಪಡಿ ಮಾಡಿ ಕೃತಕ ದಾಖಲೆಗಳನ್ನು ಸೃಷ್ಟಿಸಿರುವ ಆರೋಪವೂ ಕೇಳಿಬಂದಿದೆ.
ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲು
ಅ.17ರಂದು ಈ ಅವ್ಯವಹಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಪಿಸಿಆರ್ ಸಂಖ್ಯೆ 2495/2026ರ ಅಡಿಯಲ್ಲಿ ಖಾಸಗಿ ದೂರು ಸಲ್ಲಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ಪ್ರತಿಯನ್ನು ಅ.27ರಂದು ನ್ಯಾಯಾಲಯಕ್ಕೆ ರವಾನಿಸಲಾಗಿದ್ದು, ಪುತ್ತೂರು ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


























