ಪುತ್ತೂರು: ಪುತ್ತೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಬಿ. ಹರಿಪ್ರಸಾದ್ ಯಾದವ್ ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ಕೆಲವು ವಿಚಾರಗಳಲ್ಲಿ ಅಭಿಪ್ರಾಯ ವ್ಯತ್ಯಾಸ ಉಂಟಾಗಿರುವುದು ನಿಜ. ಆದರೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿಲ್ಲ . ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಯಾವುದೇ ಪ್ರಸ್ತಾಪ ತಮ್ಮಿಂದ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಕ್ಷದೊಳಗೆ ಕೆಲವು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಇಂತಹ ವಿಚಾರಗಳನ್ನು ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶವಿದೆ. ಇದನ್ನು ರಾಜೀನಾಮೆ ಅಥವಾ ಪಕ್ಷದೊಳಗಿನ ದೊಡ್ಡ ಸಂಘರ್ಷ ಎಂಬ ರೀತಿಯಲ್ಲಿ ಅರ್ಥೈಸಬಾರದು ಎಂದು ಅವರು ಹೇಳಿದ್ದಾರೆ.
ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂದೆಯೂ ಪಕ್ಷ ನೀಡುವ ಜವಾಬ್ದಾರಿಯೊಂದಿಗೆ ಪಕ್ಷದ ಕೆಲಸವನ್ನು ಮುಂದುವರಿಸುವುದಾಗಿ ಬಿ. ಹರಿಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ.


























