ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರ ಸಂಕೀರ್ಣದಲ್ಲಿರುವ ಎಸ್.ಕೆ. ಡಿಜಿಟಲ್ ಸ್ಟುಡಿಯೋ ಮಾಲೀಕ ಸುಬ್ರಹ್ಮಣ್ಯ ಕರಂಬಾರು ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಶರತ್, ಅವರ ತಾಯಿ ಮೀನಾಕ್ಷಿ ಹಾಗೂ ಇತರರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅ.24ರಂದು ರಾತ್ರಿ ಸ್ಟುಡಿಯೋ ಮುಂಭಾಗ ನಿಂತಿದ್ದ ವೇಳೆ ಪರಿಚಯದ ಶರತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲು ಆರಂಭಿಸಿದಾಗ ಶರತ್, ಅವರ ತಾಯಿ ಮೀನಾಕ್ಷಿ ಹಾಗೂ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಸ್ಟುಡಿಯೋ ಮತ್ತು ತನ್ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸುಬ್ರಹ್ಮಣ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ವಿಡಿಯೋ ಚಿತ್ರೀಕರಣದ ವೇಳೆ ಶರತ್ ಕೆನ್ನೆಗೆ ಹೊಡೆದಿದ್ದು, ಕೆಳಗೆ ಬಿದ್ದ ಮೊಬೈಲ್ ಫೋನ್ ಅನ್ನು ಮೀನಾಕ್ಷಿ ತೆಗೆದುಕೊಂಡಿದ್ದಾರೆ. ಬಳಿಕ ಶರತ್ ಹೊಟ್ಟೆಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ಸ್ನೇಹಿತ ಮನೋಜ್ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿತ್ರೀಕರಿಸಿದ ವಿಡಿಯೋವನ್ನು ಹಂಚಿಕೊಂಡರೆ ಕೊಲೆ ಮಾಡುವುದಾಗಿ ಇಬ್ಬರಿಗೂ ಜೀವ ಬೆದರಿಕೆ ಹಾಕಲಾಗಿದೆ. ಘಟನೆ ಬಳಿಕ ಸ್ಟುಡಿಯೋ ಮುಚ್ಚಿ ಮನೆಗೆ ತೆರಳಲು ಮೋಟಾರ್ ಸೈಕಲ್ ಏರಿದಾಗ, ಶರತ್ ಬೈಕ್ ಸಮೇತ ತನ್ನನ್ನು ದೂಡಿ ಬೀಳಿಸಿದ್ದಾರೆ ಎಂದು ಸುಬ್ರಹ್ಮಣ್ಯ ಆರೋಪಿಸಿದ್ದಾರೆ.
ಶ್ರೀರಾಮ ಭಜನಾ ಮಂದಿರ ಸಂಕೀರ್ಣದಲ್ಲಿ ಶರತ್ ಅವರ ಆತ್ಮೀಯ ವ್ಯಕ್ತಿಯೊಬ್ಬರು ಬಾಡಿಗೆಗೆ ಇದ್ದು, ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ತೆರವುಗೊಳಿಸಲಾಗಿತ್ತು. ಇದೇ ವಿಚಾರ ಘಟನೆಗೆ ಕಾರಣವಾಗಿರಬಹುದು ಎಂದು ಸುಬ್ರಹ್ಮಣ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























