ಕಡಬ: ಕೊಯಿಲ ಗ್ರಾಮದ ಸಬಳೂರಿನಲ್ಲಿ ಮನೆಗೆ ಕಲ್ಲು ತೂರಾಟ ನಡೆಸಿ ಅತ್ತೆ ನೀಲಮ್ಮ ಅವರ ತಲೆಗೆ ಗಾಯಗೊಳಿಸಿದ ಆರೋಪ ಎದುರಿಸುತ್ತಿರುವ ಸರ್ಕಾರಿ ಆಸ್ಪತ್ರೆಯ ನರ್ಸ್ ಮಂಗಳಾಬಾಯಿ ಅವರು, ಇದೀಗ ತನ್ನ ಪತಿ, ಮಾವ, ಅತ್ತೆ ಸೇರಿದಂತೆ 10 ಮಂದಿಯ ವಿರುದ್ಧ ಹಲ್ಲೆ ಹಾಗೂ ದೈಹಿಕ ಮತ್ತು ಮಾನಸಿಕ ಕಿರುಕುಳದ ಆರೋಪದಡಿ ಪ್ರತಿದೂರು ನೀಡಿದ್ದಾರೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.26ರಂದು ಪ್ರಕರಣ ದಾಖಲಾಗಿದೆ.
ಸುಮಾರು 22 ವರ್ಷಗಳ ಹಿಂದೆ ಕೊಯಿಲ ಗ್ರಾಮದ ಪದ್ಮಯ್ಯ ಗೌಡರ ಪುತ್ರ, ಶಿಕ್ಷಕ ಪರಮೇಶ್ವರ ಎಸ್. ಅವರನ್ನು ವಿವಾಹವಾಗಿದ್ದ ಮಂಗಳಾಬಾಯಿ, ಅ.1, 6, 8 ಹಾಗೂ 14ರಂದು ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅ.12ರಂದು ಸಂಜೆ ಪತಿ ಪರಮೇಶ್ವರ, ಮಾವ ಪದ್ಮಯ್ಯ ಗೌಡ, ಅತ್ತೆ ನೀಲಮ್ಮ, ನಾದಿನಿ, ಆಕೆಯ ಪತಿ ಹಾಗೂ ಮಗ ಸೇರಿದಂತೆ ಮನೆಯಲ್ಲಿದ್ದವರು ತನ್ನ ಮೇಲೆ ಮುಷ್ಟಿಯಿಂದ ಹಲ್ಲೆ ನಡೆಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಹಲ್ಲೆಯಿಂದ ಉಂಟಾದ ನೋವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಪತಿಯ ಸಂಬಂಧಿಕರಿಂದಲೂ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿರುವ ಅವರು, ಘಟನೆಯಿಂದ ಉಂಟಾದ ಆಘಾತ ಮತ್ತು ಸೂಕ್ತ ಕಾನೂನು ಅರಿವಿನ ಕೊರತೆಯಿಂದ ದೂರು ನೀಡಲು ವಿಳಂಬವಾಗಿದೆ ಎಂದು ಹೇಳಿದ್ದಾರೆ.
10 ಮಂದಿ ವಿರುದ್ಧ ಪ್ರಕರಣ ದಾಖಲು
ಮಂಗಳಾಬಾಯಿ ನೀಡಿದ ದೂರಿನ ಮೇರೆಗೆ ಪತಿ ಪರಮೇಶ್ವರ, ಮಾವ ಪದ್ಮಯ್ಯ ಗೌಡ, ಅತ್ತೆ ನೀಲಮ್ಮ, ನಾದಿನಿ ಚಂದ್ರಾವತಿ, ಕೇಶವ, ಪ್ರಥಮ್, ಉಮೇಶ್ ಕುಂಡಡ್ಕ, ಅವಿನಾಶ್ ಕುಂಡಡ್ಕ, ಸುರೇಶ್ ಕುಂಡಡ್ಕ ಹಾಗೂ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 85, 115(2), 189(2) ಮತ್ತು 191(2)ರ ಅಡಿಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 122/2026ರಂತೆ ಪ್ರಕರಣ ದಾಖಲಾಗಿದೆ.

























