ಮಂಗಳೂರು: ಯುವಕನನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಮೊದಲ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಾಲ್ಕನೇ ಆರೋಪಿಗೂ ವಿವಿಧ ಕಲಂಗಳಡಿ ಜೈಲು ಶಿಕ್ಷೆ ಪ್ರಕಟಿಸಿದೆ.
2019ರ ಜನವರಿ 3ರಂದು ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜಿನ ಬಳಿ ಈ ಕೊಲೆ ನಡೆದಿತ್ತು. ಮೊದಲ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಕೌಟಿಯ ತಂಗಿಯನ್ನು ರಾಕೇಶ್ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಸುನಿಲ್ ಕುಮಾರ್, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಸೇರಿ ರಾಕೇಶ್ನನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.
ಶಿಕ್ಷೆಯ ವಿವರ:
- 1ರಿಂದ 3ನೇ ಆರೋಪಿಗಳಿಗೆ: ಕೊಲೆ ಹಾಗೂ ಅಪರಾಧ ಸಂಚು ಆರೋಪದಡಿ ಜೀವಾವಧಿ ಶಿಕ್ಷೆ ಮತ್ತು ತಲಾ ₹15,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು.
- 1ರಿಂದ 4ನೇ ಆರೋಪಿಗಳಿಗೆ: ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ತಲಾ ₹5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.
- 4ನೇ ಆರೋಪಿಗೆ: ಆರೋಪಿಗೆ ಆಶ್ರಯ ನೀಡಿದ ಆರೋಪದಡಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು.
ಒಟ್ಟು ₹70,000 ದಂಡದ ಮೊತ್ತದಲ್ಲಿ ₹20,000ವನ್ನು ಸರ್ಕಾರಕ್ಕೆ ಹಾಗೂ ₹50,000ವನ್ನು ಮೃತ ರಾಕೇಶ್ನ ತಂದೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ತೀರ್ಪು ಪ್ರಕಟಿಸಿದರು. ಸರ್ಕಾರಿ ಅಭಿಯೋಜಕ ಮೋತೀಲಾಲ್ ಚೌದರಿ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದರು. ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ್ ಅವರು ಪ್ರಕರಣದ ತನಿಖೆ ನಡೆಸಿದ್ದರು.


























