ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಾಂಗಳದ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸರಕಾರ ರಚನೆ ಮಾಡಿರುವ ಎಸ್ಐಟಿ ಅಧಿಕಾರಿಗಳು ಮರು ತನಿಖೆ ನಡೆಯುತ್ತಿರುವಾಗಲೇ ಸೌಜನ್ಯ ಹಾಗೂ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸುವಂತೆ ಧರ್ಮಸ್ಥಳ ಗ್ರಾಮಸ್ಥ ಕಿಶೋರ್ ಎಸ್.ಐ.ಟಿಗೆ ದೂರು ನೀಡಿದ್ದಾರೆ.
ಮಂಗಳೂರು ಎಸ್ಐಟಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ ಧರ್ಮಸ್ಥಳ ಗ್ರಾಮಸ್ಥ ಕಿಶೋರ್ ಅವರು ಕುಸುಮಾವತಿಯವರು ಸೌಜನ್ಯ ತಾಯಿ ಹೌದಾ ಎಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 2015ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಕೋಂ ಚಂದಪ್ಪ ಗೌಡರಿಗೆ ಜಾಗ ಮಂಜೂರು ಆಗಿದ್ದು ಆ ಜಾಗ ಕುಸುಮಾವತಿ ಹೆಸರಿನಲ್ಲಿ ಸ್ವಾಧೀನ ಇರುವ ಬಗ್ಗೆ ದಾಖಲೆ ನೀಡಿದ್ದಾರೆ. ಅಲ್ಲದೆ ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸ್ತವ್ಯ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಸ್ಐಟಿ ರಚನೆಗೂ ಮೊದಲೇ ತಹಶಿಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೂ ದೂರು ಸಲ್ಲಿಸಿರುವ ಕಿಶೋರ್ ಇಂದಿರಾವತಿ ಇರುವಿಕೆ ಹಾಗೂ ಮತ್ತೊಬ್ಬರ ಗುರುತಿನ ವಂಚನೆ ಬಗ್ಗೆ ತನಿಖೆಗೆ ಮನವಿ ಮಾಡಿದ್ದರು. ಹಲವು ಕಾರಣ ಮುಂದಿಟ್ಟು ಎಸ್ಐಟಿಗೆ ದೂರು ಸಲ್ಲಿಸಿದ ಕಿಶೋರ್
ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂದು ಕುಸುಮಾವತಿ ಸಲ್ಲಿಸಿರುವ ಪ್ರಮಾಣ ಪತ್ರವೇ ಸುಳ್ಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಆಧಾರ್ ದಾಖಲೆ, ಪಡಿತರ ಚೀಟಿ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೌಜನ್ಯ ಹಾಗೂ ಸಹೋದರಿ ಸೌಮ್ಯ ಅವರು ಕುಸುಮಾವತಿ ಅವರು ಹೆತ್ತ ಮಕ್ಕಳೇ ಎಂಬ ಸಂಶಯ ವ್ಯಕ್ತಪಡಿಸಿರುವ ಕಿಶೋರ್ ಅನೇಕ ಅನುಮಾನಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿ ಎಸ್ಐಟಿಗೆ ದೂರು ಸಲ್ಲಿಸಿದ್ದಾರೆ.
ಇಂದಿರಾವತಿ W/o ಚಂದಪ್ಪ ಗೌಡ ಇವರ ಇರುವಿಕೆ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದ್ದಾರೆ.
ಸೌಜನ್ಯ ವಾಸ್ತವವಾಗಿ ಯಾರ ಮಗಳು ಇಂದಿರಾವತಿಯವರದ್ದೇ ಅಥವಾ ಕುಸುಮಾವತಿಯವರದ್ದೇ , ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳು ಮತ್ತು ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆಯ ಮೂಲಕ ತನಿಖೆ ನಡೆಸಬೇಕೆಂದು ಕೋರಿದ್ದಾರೆ.
ಕುಸುಮಾವತಿಯವರನ್ನು ವಿಚಾರಣೆಗೆ ಒಳಪಡಿಸಿ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಿ ಸಂಶಯಗಳಿಗೆ ಉತ್ತರ ನೀಡಬೇಕೆಂದು ಕೋರಿದ್ದಾರೆ.
ಚಂದ್ರಪ್ಪ ಗೌಡರ ಕುಟುಂಬ ವಂಶವೃಕ್ಷವನ್ನು ಪರಿಶೀಲಿಸಿ, ಅವರ ಕುಟುಂಬದ ಪಾರಂಪರಿಕ ಹಕ್ಕು ಮತ್ತು ನೆರೆಯವರಿಂದ ಹೇಳಿಕೆಗಳನ್ನು ದಾಖಲಿಸಬೇಕು, ಗುರುತು ಚೀಟಿಯಲ್ಲಿ ವಂಚನೆ, ದಾಖಲೆ ಫೋರ್ಜರಿ, ಸುಳ್ಳು ಪ್ರಮಾಣಪತ್ರ ಹಾಗೂ ಸರಕಾರಕ್ಕೆ ವಂಚನೆ ಸಂಬಂಧಪಟ್ಟವರ ಹಾಗೂ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕುಸುಮಾವತಿಯವರು ನಿಜವಾದ ತಾಯಿ ಅಲ್ಲದಿದ್ದರೂ ಜನರ ಸಹಾನುಭೂತಿ ಪಡೆಯುವ ಉದ್ದೇಶದಿಂದ ತಾನು ಅವಳ ತಾಯಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು, ಜಮೀನಿನ ವಿಚಾರಕ್ಕೆ ಕೊಲೆ ನಡೀತಾ ಎಂಬ ಬಗ್ಗೆಯೂ ತನಿಖೆ ಮತ್ತು ಸೌಜನ್ಯ ಮಾವ ವಿಠಲ ಗೌಡ ವಿರುದ್ದವೂ ತನಿಖೆ ನಡೆಸುವಂತೆ ಕಿಶೋರ್ ಮನವಿ ಮಾಡಿದ್ದಾರೆ.


























