ಉಪ್ಪಿನಂಗಡಿ: ತೆಂಗಿನಕಾಯಿ ಕೀಳುವ ಕೆಲಸಕ್ಕೆಂದು ಉಪ್ಪಿನಂಗಡಿಯಿಂದ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದ್ದ ಕೂಲಿ ಕಾರ್ಮಿಕನೊಬ್ಬ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಮುಚ್ಚಿಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮೃತನ ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಾರಿಂಜ ಬೈತಾರು ಮನೆ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ದೇವದಾಸ್ (47) ಮೃತಪಟ್ಟ ಕಾರ್ಮಿಕ. ಉಳ್ಳಾಲ ನಿವಾಸಿ ಎಂದು ಹೇಳಲಾಗಿರುವ ಸಯೀದ್ ಹಸನ್ ಎಂಬಾತ ಅ.23ರಂದು ತೆಂಗಿನಕಾಯಿ ಕೀಳುವ ಕೆಲಸಕ್ಕೆಂದು ದೇವದಾಸ್ ಅವರನ್ನು ಉಪ್ಪಿನಂಗಡಿಯಿಂದ ಕರೆದೊಯ್ದಿದ್ದ ಎನ್ನಲಾಗಿದೆ.
ಅ.27ರಂದು ದೇವದಾಸ್ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡದೆ, ಅವರು ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸಯೀದ್ ಹಸನ್ ಸುಳ್ಳು ಮಾಹಿತಿ ನೀಡಿದ್ದಾನೆ ಎಂದು ಮೃತರ ಪತ್ನಿ ಪದ್ಮಲತಾ ದೂರಿನಲ್ಲಿ ಆರೋಪಿಸಿದ್ದಾರೆ. ಸಾವಿನ ಬಗ್ಗೆ ಪ್ರಶ್ನಿಸಿದಾಗ, ಪೊಲೀಸ್ ಇಲಾಖೆ ಹಾಗೂ ಆಸ್ಪತ್ರೆಯಲ್ಲಿ ತಾನು ಸೂಕ್ತ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಆತ ಹೇಳಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇವದಾಸ್ ಅನಾರೋಗ್ಯಕ್ಕೀಡಾಗಿದ್ದರೂ ವಿಶ್ರಾಂತಿ ನೀಡದೆ ದುಡಿಸಿರುವುದರಿಂದ ಮೃತಪಟ್ಟಿರಬಹುದು ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಹಿಂಸೆ ನೀಡಿ ಸಾವಿಗೆ ಕಾರಣವಾಗಿರಬಹುದು ಎಂಬ ಸಂಶಯವನ್ನು ಪತ್ನಿ ವ್ಯಕ್ತಪಡಿಸಿದ್ದಾರೆ. ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಲು ನಿರಾಕರಿಸಿದ ಆರೋಪ
ಪತಿಯ ಸಾವಿನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ, ಅವರನ್ನು ಕೆಲಸಕ್ಕೆ ಕರೆದೊಯ್ದ ಸಯೀದ್ ಹಸನ್ ವಿರುದ್ಧ ದೂರು ನೀಡಲು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ್ದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ದೇವದಾಸ್ ಮೃತಪಟ್ಟಿರುವುದು ಶಿವಮೊಗ್ಗದಲ್ಲಿ ಆಗಿರುವುದರಿಂದ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಉಪ್ಪಿನಂಗಡಿ ಪೊಲೀಸರು ಸೂಚಿಸಿದ್ದರು ಎನ್ನಲಾಗಿದೆ. ಆದರೆ ದೇವದಾಸ್ ಅವರನ್ನು ಕೆಲಸಕ್ಕೆಂದು ಕರೆದೊಯ್ದಿದ್ದು ಉಪ್ಪಿನಂಗಡಿಯಿಂದಲೇ ಆಗಿರುವುದರಿಂದ ಇಲ್ಲಿಯೂ ದೂರು ಸ್ವೀಕರಿಸಬೇಕಿತ್ತು ಎಂಬುದು ಕುಟುಂಬಸ್ಥರ ವಾದವಾಗಿದೆ.
ಬಳಿಕ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠoದೂರು ಅವರು ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಪೊಲೀಸ್ ಉನ್ನತಾಧಿಕಾರಿಗಳ ಗಮನಕ್ಕೆ ತಂದ ನಂತರ ಬುಧವಾರ ಉಪ್ಪಿನಂಗಡಿ ಪೊಲೀಸರು ದೂರು ಸ್ವೀಕರಿಸಲು ಮುಂದಾಗಿದ್ದಾರೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.
ಕಾರ್ಮಿಕನ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.


























