ದೀಪಾವಳಿ ಹೆಸರಲ್ಲಿ ಬೆಂಗಳೂರಿನ ಮಾರತಹಳ್ಳಿಯ ಯಮಲೂರು ಕರಿಯಮ್ಮನ ಅಗ್ರಹಾರ ರೋಡ್ನ ಖಾಸಗಿ ವಿಲ್ಲಾದಲ್ಲಿ ನಡೆಯುತ್ತಿದ್ದ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ. ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಬಂಧಿತರಾಗಿದ್ದಾರೆ. ರೇವ್ ಪಾರ್ಟಿ ಬದಲು ಪೂಲ್ಪಾರ್ಟಿ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಹುಡುಗಿಯರು, ಗಾಂಜಾ, ಎಂಡಿಎಂಎ ಸೇರಿ ಡ್ರಗ್ಸ್ಗಳೂ ಲಭ್ಯವಿದ್ದವು. ಆನ್ಲೈನ್ ಆ್ಯಪ್ ಮೂಲಕ ಈ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.
ವಾಟ್ಸ್ಯಾಪ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಯುವತಿಯರ ಮಾದಕ ಫೋಟೋ ವಿಡಿಯೋಗಳನ್ನ ಪೋಸ್ಟ್ ಮಾಡಿ ಯುವಕರಿಗೆ ಗಾಳ ಹಾಕಲಾಗಿತ್ತು. 50 ಅಪರಿಚಿತರ ಜೊತೆಗೆ ಪೂಲ್ ಪಾರ್ಟಿ ಆಯೋಜನೆ ಎಂದು ಮಾಹಿತಿ ಹಂಚಿಕೊಂಡಿದ್ದ ಆಯೋಜಕರು, ಪ್ರತಿ ಯುವಕರಿಗೆ 1710, ಯುವತಿಯರಿಗೆ 1080, ಕಪಲ್ಸ್ ಗೆ 2400 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಿದ್ದರು. ಪಾರ್ಟಿಯಲ್ಲಿ ಸಿಗುವ ಇನ್ನಿತರ ಮಾದಕ ವಸ್ತುಗಳಿಗೆ ಬೇರೆ ಚಾರ್ಜ್ ಮಾಡಲಾಗುತ್ತಿತ್ತು. ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಪಾರ್ಟಿ ಆಯೋಜನೆ ಮಾಡಲಾಗಿತ್ತು.
ಇನ್ನು ಪೊಲೀಸರಿಗೆ ಗೊತ್ತಾಗುತ್ತೆ ಎಂದು ಪಾರ್ಟಿಗೆ ಬರುವವರಿಗೆ ನಿಖರ ಸ್ಥಳದ ಮಾಹಿತಿ ನೀಡುತ್ತಿರಲಿಲ್ಲ. ಪ್ರತಿ ಬಾರಿಯೂ ಬೇರೆ ಬೇರೆ ಸ್ಥಳದಲ್ಲಿ ಪಾರ್ಟಿ ಆಯೋಜನೆ ಮಾಡ್ತಿದ್ದ ಆರೋಪಿಗಳು, ಅಂದಾಜು ಸ್ಥಳದ ಮಾಹಿತಿ ನೀಡಿ ಫೋನ್ ಮೂಲಕ ಕರೆಸಿಕೊಳ್ಳುತ್ತಿದ್ದರು. ಸಿಸಿಬಿ ದಾಳಿ ವೇಳೆ ಖಾಸಗಿ ಪಾರ್ಟಿ ಹೆಸರಲ್ಲಿ ಅನಧಿಕೃತ ಚಟುವಟಿಕೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ಪಾರ್ಟಿಗೆ ಯಾವುದೇ ಪ್ರಾಧಿಕಾರದ ಅನುಮತಿ ಕೂಡ ಇಲ್ಲ ಎಂಬುದು ದಾಳಿ ವೇಳೆ ಗೊತ್ತಾಗಿದೆ. ನಿಷೇಧಿತ ಹುಕ್ಕಾ, ಮದ್ಯ, ಡ್ರಗ್ಸ್ ಮತ್ತು ಇತರ ವಸ್ತುಗಳು ಸ್ಥಳದಲ್ಲಿ ಕಂಡುಬಂದಿವೆ. ದಾಳಿ ವೇಳೆ ಸಿಕ್ಕ ವಸ್ತುಗಳನ್ನ ವಶಕ್ಕೆ ಪಡೆದು ಪರಿಶೀಲನೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಮಾರತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























