ಅರಂತೋಡು: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿ ಸಾವಿಗೀಡಾದ ಘಟನೆ ವರದಿಯಾಗಿದೆ.
ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಮೃತಪಟ್ಟಿದ್ದು, ಭಾಗಮಂಡಲದ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ.
ತೋಟವು ಎತ್ತರದ ಪ್ರದೇಶದಲ್ಲಿರುವುದರಿಂದ ಕಾಡಾನೆಗಳ ಹಿಂಡು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ಆನೆ ಮರಿ ಜಾರಿ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ ಮೆಟ್ಟಿದ್ದರಿಂದ ಅದು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಆನೆ ಮರಿ ಸಾವಿಗೆ ನಿಖರವಾದ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.


























