ಕೊಣಾಜೆ, ಅ.21: ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್ಗೆ ಪಿಕಪ್ ವಾಹನ ಢಿಕ್ಕಿ ಹೊಡೆಸಿ ಇಬ್ಬರು ಯುವಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೋಳಿಯಾರ್ ಗ್ರಾಮದ ಹಫೀಝ್ ಯಾನೆ ಅಪ್ಪಿ ಬಂಧಿತ ಆರೋಪಿ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅ.19ರಂದು ಕಿನ್ಯ ಅರಬಿ ನಗರದ ಮುಹಮ್ಮದ್ ಅರ್ಫಾಝ್ ಹಾಗೂ ಕಿನ್ಯ ಉಕ್ಕುಡದ ಮುಹಮ್ಮದ್ ಜುನೈದ್ ಅವರು ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಪಿಕಪ್ ವಾಹನ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಅರ್ಫಾಝ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಜುನೈದ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಆರಂಭದಲ್ಲಿ ಇದೊಂದು ರಸ್ತೆ ಅಪಘಾತವೆಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯ ವೇಳೆ ಇದು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ ಎಂಬುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.


























