ಮುರುಳ್ಯ ಗ್ರಾಮದ ಸಮಹಾದಿ ಎಂಬಲ್ಲಿ ರಕೇಶ್ವರಿ ಸಾನಿಧ್ಯ ನಿರ್ಮಾಣಕ್ಕೆಂದು ಮೀಸಲಿಟ್ಟಿದ್ದ ಕುಮ್ಕಿ ಜಾಗವನ್ನು ಮುಸ್ಲಿಂ ವಕ್ಫ್ ಬೋರ್ಡ್ಗೆ ದಫನ ಭೂಮಿಗಾಗಿ ಕಾದಿರಿಸಿ ಕಂದಾಯ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮುರುಳ್ಯದಲ್ಲಿ ಮುಸ್ಲಿಂ ದಫನ ಭೂಮಿಗಾಗಿ ವಕ್ಫ್ ಬೋರ್ಡ್ಗೆ ಕಾದಿರಿಸಿ ಆದೇಶಿಸಿದ್ದ ಜಾಗದಲ್ಲಿ ರಕೇಶ್ವರಿ ಸಾನಿಧ್ಯವಿರುವುದರಿಂದ ಆ ಜಾಗದಲ್ಲಿ ಮುಸ್ಲಿಂ ದಫನ ಭೂಮಿ ಮಾಡುವುದು ಸರಿಯಲ್ಲವೆಂದು ಕೆಲ ದಿನಗಳ ಹಿಂದೆ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆದಿತ್ತು .
ಮುರುಳ್ಯ ಹುದೇರಿಯ ಕಿಶನ್ ಎಂಬವರ ಪತ್ನಿ ಚೇತನಾ ಕೆ.ಸಿ.ಅವರು ವಿವಾದದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಸ್ವಾಧೀನದ ಕುಮ್ಕಿ ಭೂಮಿಯನ್ನು ಏಕಾಏಕಿಯಾಗಿ ಮುಸ್ಲಿಮರ ದಫನ ಭೂಮಿಗೆಂದು ಕಾದಿರಿಸಿ ಕಂದಾಯ ಇಲಾಖೆ ಆದೇಶಿಸಿದೆ ಎಂದು ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ಆದೇಶಕ್ಕೆ ತಡೆ ಕೋರಿದ್ದರು.
ಜಿಲ್ಲಾಧಿಕಾರಿ ಮತ್ತು ಸುಳ್ಯ ತಹಶೀಲ್ದಾರ್ ಅವರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿತ್ತು. ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು,ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ದೂರುದಾರರ ಪರ ಹಿರಿಯ ವಕೀಲ ಡಾ|ಅರುಣ್ಶ್ಯಾಂ ವಾದಿಸಿದ್ದರು. ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.
























