ಬೆಂಗಳೂರು: ಬಿಸ್ಲೆರಿ ಭಾರತದ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರಾಂಡ್ ಆಗಿದೆ. 1969ರಲ್ಲಿ ಸ್ಥಾಪಿಸಲ್ಪಟ್ಟ ಬಿಸ್ಲೆರಿ ಇಂಟರ್ನ್ಯಾಶನಲ್ ಸಂಸ್ಥೆಯು, ದೇಶಾದ್ಯಂತ ಮಾರುಕಟ್ಟೆಯಲ್ಲಿ ಒಂದು ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಆದ್ರೆ, ಇದೀಗ ಬಿಸ್ಲೆರಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ ಎಂದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೌದು.. ಬಿಸ್ಲೆರಿ ನೀರಿನ ಸ್ಯಾಂಪಲ್ನಲ್ಲಿ ನಿಗದಿತ ಬ್ರೋಮೇಟ್ ಮಿತಿ ಉಲ್ಲಂಘನೆಯಾಗಿದೆ. ಹೀಗಾಗಿ FSSAI ಆ್ಯಕ್ಟ್ 2006ರ ಅಡಿ ನೀರು ಅನ್ಸೇಫ್ ಎಂದು ಘೋಷಣೆ ಮಾಡಲಾಗಿದ್ದು, ಕಾನೂನು ಕ್ರಮಕ್ಕೆ ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ.
ಮೇಲ್ಮನವಿ ಬಳಿಕ ರೆಫರಲ್ ಫುಡ್ ಲ್ಯಾಬ್ನಲ್ಲೂ ಪರೀಕ್ಷೆ ಮಾಡಲಾಗಿದ್ದು, ಅಲ್ಲೂ ಸಹ ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ ಪತ್ತೆಯಾಗಿದೆ. ಎರಡನೇ ಲ್ಯಾಬ್ ಪರೀಕ್ಷೆಯಲ್ಲೂ ಅನ್ಸೇಫ್ ಎಂದು ವರದಿ ಬಂದಿದ್ದು, ಈ ಮೂಲಕ ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘನೆಯಾಗಿರುವುದು ದೃಢವಾಗಿದೆ. ಇದರಿಂದ ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ.
ಆರೋಗ್ಯ ಸಚಿವ ಯುಟಿ ಖಾದರ್ ಆದೇಶದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗದಿಂದ ಇತ್ತೀಚೆಗೆ ರಾಜ್ಯಾದ್ಯಂತ 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗಿತ್ತು. ಈ ತಪಾಸಣೆಯಲ್ಲಿ 32 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಲವು ಘಟಕಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ಲೇಬಲ್ನಲ್ಲಿ ತಪ್ಪುಗಳು ಮತ್ತು ಕೀಟ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿತ್ತು.
24 ಘಟಕಗಳಿಗೆ ನೋಟಿಸ್
ಇನ್ನು ತಪಾಸಣೆಯ ಸಂದರ್ಭದಲ್ಲಿ 24 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಸುರಕ್ಷತೆ ನಿಯಮಾವಳಿಗಳನ್ನು ಪಾಲನೆ ಮಾಡದೆ ಇರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿತ್ತು.
ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದಿದ್ದ ಖಾದರ್
ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಜನರ ಆರೋಗ್ಯದ ಜೊತೆ ಆಟವಾಡುವವರು ಎಷ್ಟೇ ದೊಡ್ಡವರಾಗಿರಲಿ, ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂತಹ ತಪಾಸಣೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅವರು ಎಚ್ಚರಿಕೆ ನೀಡಿದ್ದರು.

























