ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ಮಾಡಿದ ಆರೋಪ ಹಾಗೂ ಅದನ್ನು ಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವ ಸಹಿತ ಆರು ಜನರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 66 ಸಿಸಿಎಚ್ ನ್ಯಾಯಾಲಯ ವಜಾ ಮಾಡಿದೆ. ಇದರಿಂದಾಗಿ ಆರು ಜನರೂ ಈಗ ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ಎಂದು ಹೇಳಲಾದ ವೀಡಿಯೋ ಒಂದನ್ನು ಹರಿಬಿಡಲಾಗಿತ್ತು. ಈಬಗ್ಗೆ ಸಿದ್ದರಾಮಯ್ಯ ಖುದ್ದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿತ್ತು ತನಿಖೆಯ ಭಾಗವಾಗಿ ಖಾಸಗಿ ವಾಹಿನಿ ಮುಖ್ಯಸ್ಥ, ಉಚ್ಚಾಟಿತ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್, ಕೆ.ವಿ.ಪ್ರಶಾಂತ್ ಕುಮಾರ್, ವಿನೋದ್ ಕುಮಾರ್ ಸೇರಿ ಆರು ಜನರಿಗೆ ಸಿಸಿಬಿ ಪೊಲೀಸರು ನೊಟೀಸ್ ಜಾರಿ ಮಾಡಿದ್ದರು. ಈ ಹಿನ್ನಲೆ ಆರು ಜನ ಕೂಡಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಶರತ್ತು ಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ನ.20ರಂದು ನ್ಯಾಯಾಲಯ ಕೃಪಾ ಆಳ್ವ ಸಹಿತ ಆರು ಜನರ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ವಜಾಗೊಳಿಸಿದೆ.
ಇದರಿಂದಾಗಿ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದೆ ಇಲ್ಲವೇ ಪೊಲೀಸರೇ ಬಂಧಿಸುವ ಸಾಧ್ಯತೆ ಇದೆ.

























