ವಿಟ್ಲ: ಸಾರ್ವಜನಿಕ ತೋಡಿನಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದ ನಾಲ್ವರನ್ನು ಮತ್ತು ಮರಳು ತುಂಬಿದ್ದ ಪಿಕಪ್ ವಾಹನವನ್ನು ವಶಪಡಿಸಿಕೊಂಡ ಘಟನೆ ನ.19ರಂದು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಪುಣಚ ಗ್ರಾಮದ ವಿಶ್ವಾಸ್ ಹೆಚ್. (27), ಶಶಿಧರ (45), ಹರೀಶ್ ಅಜ್ಜಿನಡ್ಕ (35) ಹಾಗೂ ಕೇಪು ಗ್ರಾಮದ ಪುಷ್ಪರಾಜ್ ಎನ್. (32) ಎಂದು ಗುರುತಿಸಲಾಗಿದೆ.
ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಪಿಕಪ್ ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ಐ ರತ್ನಕುಮಾರ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಮರಳು ತುಂಬಿಸುತ್ತಿರುವುದು ಪತ್ತೆಯಾಗಿದ್ದು, ಯಾವುದೇ ಪರವಾನಿಗೆ ಇಲ್ಲದೆ ಮರಳುಗಾರಿಕೆ ನಡೆಸುತ್ತಿರುವುದು ದೃಢಪಟ್ಟಿದೆ.
ಸ್ಥಳದಲ್ಲಿದ್ದ ಮರಳು ತುಂಬಿದ KA-70-8785 ನೋಂದಣಿಯ ಪಿಕಪ್ ವಾಹನ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

























