ಬೆಳ್ತಂಗಡಿ: ಆಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಮಾರು ₹4.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಮಡಂತ್ಯಾರಿನಲ್ಲಿ ನ.16ರಂದು ನಡೆದಿದೆ.
ಮಡಂತ್ಯಾರು ನಿವಾಸಿ ರಾಜೇಶ್ (43) ಎಂಬವರಿಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಘಟನೆ ನಡೆದಿದೆ. ನ.16ರಂದು ಸಂಜೆ ಆಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಅಪರಿಚಿತರು, ಮಾಲಕರ ಗಮನಕ್ಕೆ ಬಾರದಂತೆ ಸುಮಾರು 35 ಗ್ರಾಂ ತೂಕದ ₹4,40,000 ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಮರುದಿನ ಬೆಳಿಗ್ಗೆ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಜೋಡಿಸುವ ವೇಳೆ ಕಳವು ನಡೆದಿರುವುದು ಮಾಲಕರ ಗಮನಕ್ಕೆ ಬಂದಿದೆ. ಈ ಕುರಿತು ರಾಜೇಶ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 92/2026ರಂತೆ ಬಿಎನ್ಎಸ್ ಕಲಂ 303(2) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























