ಪುತ್ತೂರು: ಧಾರ್ಮಿಕತೆ, ಸಂಸ್ಕೃತಿ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುವ ಉದ್ದೇಶದಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಡಿ. 8ರಂದು ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ-2026’ ಕಾರ್ಯಕ್ರಮಕ್ಕೆ ನ. 18ರಂದು ಚಪ್ಪರ ಮುಹೂರ್ತ ನೆರವೇರಿತು.
ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಅರ್ಚಕ ವೇ.ಮೂ. ಜಯರಾಮ ಜೋಯಿಷ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಿದರು. ಬಳಿಕ ರವೀಂದ್ರ ಶೆಟ್ಟಿ ನುಳಿಯಾಲು ಹಾಗೂ ಅಮಿತಾ ಆರ್. ಶೆಟ್ಟಿ ದಂಪತಿ ಚಪ್ಪರದ ಕಂಬಕ್ಕೆ ತೀರ್ಥ ಪ್ರೋಕ್ಷಣೆ ಮಾಡಿದರು. ಅತಿಥಿಗಳು ತೆಂಗಿನಕಾಯಿ ಒಡೆದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಪರವೂರಿನಲ್ಲೂ ದೀಪೋತ್ಸವದ ಬೆಳಕು ಪ್ರಜ್ವಲಿಸಲಿ: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ಪಿ. ವಾಮನ್ ಪೈ ಮಾತನಾಡಿ, ಮಹಾಲಿಂಗೇಶ್ವರ ದೇವರು ನಮಗೆ ಅನ್ನದಾತ ಹಾಗೂ ಆಶ್ರಯದಾತ. ಇಂತಹ ದೇವರ ಸೇವೆ ಮಾಡುವ ಅವಕಾಶ ನಮ್ಮೆಲ್ಲರ ಭಾಗ್ಯ. ರವೀಂದ್ರ ಶೆಟ್ಟಿಯವರ ಕಲ್ಪನೆಯಂತೆ ಪುತ್ತೂರಿನಲ್ಲಿ ಹೊಸ ಪ್ರಯೋಗ ಸಾಕಾರಗೊಳ್ಳುತ್ತಿದೆ. ದೀಪೋತ್ಸವ ಯಶಸ್ವಿಯಾಗಿ ಪುತ್ತೂರಿನ ಗಡಿ ಮೀರಿ ಪರವೂರಿನಲ್ಲೂ ಅದರ ಕೀರ್ತಿ ಹಾಗೂ ಬೆಳಕು ಪ್ರಜ್ವಲಿಸಲಿ ಎಂದು ಹಾರೈಸಿದರು.
ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದ ಒಗ್ಗಟ್ಟು ಸಾಧ್ಯ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಮಹಾದೀಪೋತ್ಸವಕ್ಕೆ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜ ಒಗ್ಗಟ್ಟಾಗಿ ಮುನ್ನಡೆಯಬೇಕು. ದೇವಸ್ಥಾನದ ಗದ್ದೆಯಲ್ಲಿ ಈಗಾಗಲೇ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುತ್ತಿದ್ದು, ಎಲ್ಲರ ಒಮ್ಮತ ಮತ್ತು ಸಹಕಾರದಿಂದ ಇಂತಹ ಚಟುವಟಿಕೆಗಳು ಮುಂದುವರಿಯಬೇಕು. ಮುಂದಿನ ದಿನಗಳಲ್ಲಿ ನಡೆಯಲಿರುವ ದೇವಸ್ಥಾನದ ಜೀರ್ಣೋದ್ಧಾರ ಹಾಗೂ 2028ರ ಜನವರಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೂ ಭಕ್ತರ ಸಹಕಾರ ದೊರೆಯಲಿ ಎಂದರು.
ಜಾತ್ರೆಯ ಮಾದರಿಯಲ್ಲಿ ನಿರಂತರ ಉತ್ಸವವಾಗಲಿ: ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ದೀಪೋತ್ಸವ ಆಯೋಜಿಸುವ ಸಂಕಲ್ಪ ಮೂಡಿದೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಶಾಸಕರಿಗೆ ಪ್ರಸ್ತಾಪಿಸಿದಾಗ ಉತ್ತಮ ಪ್ರೋತ್ಸಾಹ ಮತ್ತು ಸಹಕಾರ ದೊರೆತಿದೆ. ಮುಂದಿನ ದಿನಗಳಲ್ಲಿ ಪುತ್ತೂರು ದೀಪೋತ್ಸವ ಜಾತ್ರೆಯ ಮಾದರಿಯಲ್ಲಿ ನಿರಂತರವಾಗಿ ನಡೆಯುವ ಉತ್ಸವವಾಗಬೇಕು. ಈಗಾಗಲೇ ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆ ಮಾಡಲಾಗಿದ್ದು, ಪ್ರಚಾರದ ಅಂಗವಾಗಿ ವಿವಿಧ ವಾಹನಗಳಿಗೆ ಸ್ಟಿಕ್ಕರ್ ಅಳವಡಿಸುವ ಕಾರ್ಯವೂ ನಡೆದಿದೆ. ಎಲ್ಲರೂ ಕೈಜೋಡಿಸಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ವಿಶಾಲ ಚಪ್ಪರದ ವ್ಯವಸ್ಥೆ: ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿರುವುದರಿಂದ ವಿಶಾಲವಾದ ಚಪ್ಪರ ನಿರ್ಮಿಸಲಾಗುತ್ತಿದೆ. ಈಗಿರುವ ಚಪ್ಪರದ ಮುಂಭಾಗ ಮತ್ತು ಹಿಂಭಾಗದಲ್ಲಿ ತಲಾ 20 ಚದರ ಅಡಿ ವಿಸ್ತರಣೆ ಮಾಡಲಾಗುವುದು. ನ. 25ರಂದು ದೀಪೋತ್ಸವದ ಕಾರ್ಯಾಲಯ ಉದ್ಘಾಟನೆ ಹಾಗೂ ನ. 30ರಂದು ಪ್ರಚಾರಾರ್ಥ ರಥಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಉದ್ಯಮಿ ಜಯಕುಮಾರ್ ನಾಯರ್ ಹಾಗೂ ಡಿ. ಶಿವಭಟ್ ಜ್ಯುವೆಲ್ಲರ್ಸ್‌ನ ಈಶ್ವರಮುರಳಿ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಸುಜೀರ್ ಶೆಟ್ಟಿ ವಿವಿಧ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು.
ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ, ಸಹ ಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ, ಜಗನ್ಮೋಹನ್ ರೈ ಸೂರಂಬೈಲು, ರಾಧಾಕೃಷ್ಣ ಬೋರ್ಕರ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಮಿತಾ ಆರ್. ಶೆಟ್ಟಿ ನುಳಿಯಾಲು, ಜಯಂತಿ ನಾಯಕ್, ಗೌರಿ ಬನ್ನೂರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

























