ವಿಟ್ಲ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಗಲಾಟೆ ನಡೆಸಿದ ಐವರು ಸೇರಿದಂತೆ ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.23ರಂದು ಸಂಜೆ ಬೊಳ್ಪಾದೆಯಲ್ಲಿ ಸುಮಾರು 5ರಿಂದ 10 ಮಂದಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿಗೆ ಕೆಲವರು ಗುಂಪು ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಲಾಟೆಯಲ್ಲಿ ಭಾಗಿಯಾಗಿದ್ದವರು ಪರಾರಿಯಾಗಿದ್ದಾರೆ.
ಈ ಪೈಕಿ ಬಶೀರ್ ಪುಣಚ, ಆಶಿಕ್ ಬೋಳ್ಬಾದೆ, ಸಫ್ವಾನ್ ಕುಡ್ತಮುಗೇರು, ಅಸೀಫ್ ಕೆಲಿಂಜ ಹಾಗೂ ದರ್ವೇಶ್ ಬೋಳ್ಬಾದೆ ಸೇರಿದಂತೆ ಇತರರು ಗಲಾಟೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 242/2026, ಬಿಎನ್ಎಸ್ 2023ರ ಕಲಂ 194(2)ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























