ಪುತ್ತೂರು: ಭಾರೀ ಗಾಳಿ ಮಳೆಗಳಿಂದ ಮನೆ ಹಾನಿಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ವಿಧವೆ ಮಹಿಳೆಯ ನೆರವಿಗೆ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ತಾತ್ಕಾಲಿಕವಾಗಿ ಮನೆಯ ಮೇಲ್ಛಾವಣಿ ದುರಸ್ತಿ ಮಾಡಿ ಶೀಟು ಅಳವಡಿಸುವ ವ್ಯವಸ್ಥೆ ಮಾಡುವುದರ ಜೊತೆಗೆ, ಅಗತ್ಯವಿದ್ದರೆ ಹೊಸ ಮನೆ ನಿರ್ಮಿಸಿಕೊಡುವ ಭರವಸೆಯನ್ನೂ ನೀಡಿದ್ದಾರೆ.
ಮೇ 11ರಂದು ಸಂಜೆ ಕೆಯ್ಯರು ಗ್ರಾಮದ ಸಣಂಗಳ ನಿವಾಸಿ ಲೀಲಾವತಿ ಯಶೋಧರ ಗೌಡ ಅವರ ಮನೆಗೆ ಭಾರೀ ಗಾಳಿ ಮತ್ತು ಮಳೆಯ ಅಬ್ಬರದಿಂದ ಹಾನಿಯಾಗಿದೆ. ಮನೆಯ ಮೇಲ್ಛಾವಣಿ ಕುಸಿದು ಮನೆಯೊಳಗೆ ನೀರು ನುಗ್ಗಿ ದಿನನಿತ್ಯ ಬಳಕೆಯ ವಸ್ತುಗಳು ಹಾನಿಗೊಳಗಾಗಿದ್ದವು. ಪತಿಯನ್ನು ಕಳೆದುಕೊಂಡು ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಲೀಲಾವತಿ ಅವರ ಕುಟುಂಬಕ್ಕೆ ಇದು ದೊಡ್ಡ ಆಘಾತವಾಗಿತ್ತು.
ಘಟನೆಯ ಮಾಹಿತಿ ತಿಳಿದ ತಕ್ಷಣ ಮೇ 12ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಸಹಜ್ ರೈ ಬಳಜ್ಜ, ಕುಟುಂಬದ ಪರಿಸ್ಥಿತಿಯನ್ನು ಪರಿಶೀಲಿಸಿ ತಕ್ಷಣ ಸ್ಪಂದಿಸಿದರು. ಮಳೆ ನೀರು ನೇರವಾಗಿ ಮನೆಯೊಳಗೆ ಬೀಳುತ್ತಿರುವುದನ್ನು ಗಮನಿಸಿದ ಅವರು, ಮನೆಯ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ತಕ್ಷಣ ಆರಂಭಿಸಲು ಸೂಚಿಸಿದರು.
ಈ ವೇಳೆ ಶ್ರೀ ದುರ್ಗಾ ಇಂಡಸ್ಟ್ರೀಸ್‌ನ ವಿನಯ್ ಅವರಿಗೆ ಅಗತ್ಯ ಶೀಟು ಅಳವಡಿಕೆ ಹಾಗೂ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಅನುದಾನ ದೊರಕಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.
“ಯಾವುದೇ ಕಾರಣಕ್ಕೆ ಸರ್ಕಾರದ ಅನುದಾನ ಸಿಗದಿದ್ದರೆ, ಮಳೆಗಾಲದ ನಂತರ ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ಹೊಸ ಮನೆ ನಿರ್ಮಿಸಿಕೊಡಲಾಗುವುದು. ಈ ತಾಯಿ ಮತ್ತು ಮಕ್ಕಳಿಗೆ ಸುರಕ್ಷಿತ ಆಶ್ರಯ ಒದಗಿಸುವುದು ನಮ್ಮ ಕರ್ತವ್ಯ,” ಎಂದು ಅವರು ಹೇಳಿದರು.
ಸಹಜ್ ರೈ ಬಳಜ್ಜ ಅವರ ಈ ಸಾಮಾಜಿಕ ಕಳಕಳಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆ ನಿಲ್ಲುವ ಯುವ ನಾಯಕತ್ವಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜೇಶ್ ರೈ ಪರ್ಪುಂಜ, ಶರತ್ ಕುಮಾರ್ ಮಾಡಾವು, ಶರತ್ ರೈ ದೇರ್ಲ, ವಿಜಯ ಕುಮಾರ್ ಸಣಂಗಳ, ದಿನೇಶ್ ವಾಸುಕಿ, ಚಂದ್ರಶೇಖರ ರೈ ಸಣಂಗಳ, ಸೃಜನ್ ರೈ, ಹರ್ಷ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



























