ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಸಿಎಂ ಡಿಕೆ ಶಿವಕುಮಾರ್ ನಡುವೆ ರಾಜಕೀಯ ಮತ್ತು ವ್ಯಾವಹಾರಿಕ ಸಂಬಂಧವಿದೆ, ಅವರಿಬ್ಬರೂ ಬ್ಯುಸಿನೆಸ್ ಪಾರ್ಟ್ನರ್ಸ್ ಎಂಬ ಸುದ್ದಿ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಹೀಗಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಅವರೇ ಅಡ್ಡ ಮತದಾನ ಮಾಡಿಸಿದ್ದಾರೆ ಎಂಬ ಆರೋಪವೂ ಈಗ ಮುನ್ನೆಲೆಗೆ ಬಂದಿದೆ. ಇದನ್ನು ತಳ್ಳಿಹಾಕಿರುವ ಬಿವೈವಿ, ಧರ್ಮಸ್ಥಳದಲ್ಲಿ ಸ್ಪಷ್ಟನೆ ನೀಡಿದ್ದಾರೆ.ಈ ವೇಳೆ ಅವರೊಂದಿಗೆ ಓರ್ವ ಸಂಸದ, 8 ಶಾಸಕರು ಹಾಗೂ ಇಬ್ಬರು ಎಂಎಲ್‌ಸಿಗಳು ಉಪಸ್ಥಿತರಿದ್ದರು.
ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಎಲ್ಲಾ ಅಪಪ್ರಚಾರಗಳಿಗೂ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಪೂರ್ಣವಿರಾಮ ಇಟ್ಟಿದ್ದಾರೆ. ಅಡ್ಡ ಮತದಾನದ ಪ್ರಸಂಗ ನನಗೆ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಆಘಾತ ಮತ್ತು ನೋವು ತಂದಿತ್ತು. ನಾನು ಭಾವನಾತ್ಮಕ ವ್ಯಕ್ತಿಯಾಗಿದ್ದರಿಂದಲೇ ಸತ್ಯಾಸತ್ಯತೆ ಹೊರಬರಲಿ ಎಂದು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ಮಾತುಗಳನ್ನಾಡಿದ್ದೆ. ಆದರೆ, ಪಕ್ಷದ ಹಿರಿಯರು ನಮ್ಮ ನಮ್ಮಲ್ಲೇ ಬಗೆಹರಿಸಿಕೊಳ್ಳೋಣ ಎಂದಿದ್ದರಿಂದ ಆ ನಿರ್ಧಾರದಿಂದ ಹಿಂದೆ ಸರಿದು, ಕೇವಲ ದರ್ಶನಕ್ಕೆ ಬಂದಿದ್ದೇನೆ ಎಂದು ವಿಜಯೇಂದ್ರ ವಿವರಿಸಿದ್ದಾರೆ.
ಇದೇ ವೇಳೆ ತಮ್ಮದೇ ಪಕ್ಷದ ಕೆಲವರು ಮಾಡುತ್ತಿರುವ ಗಂಭೀರ ಆರೋಪಗಳಿಗೆ ಉತ್ತರಿಸಿದ ಅವರು, ನನಗೂ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧವಿಲ್ಲ. ಸಿಎಂ ಪರವಾಗಿ ನಾನೇ ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂದು ನನ್ನ ವಿರುದ್ಧವೇ ಅಪಪ್ರಚಾರ ಮಾಡಲಾಗಿದೆ. ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ, ಇವೆಲ್ಲವೂ ಸುಳ್ಳು. ಕೆಪಿಸಿಸಿ ಅಧ್ಯಕ್ಷರಾಗಿದ್ದವರಿಗೆ ಹಾಗೂ ಸಿಎಂ ಸ್ಥಾನಕ್ಕೆ ನೀಡಬೇಕಾದ ಗೌರವವನ್ನಷ್ಟೇ ನಾನು ನೀಡುತ್ತಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೂ ಆ ದೇವರು ಒಳ್ಳೆಯದು ಮಾಡಲಿ ಎಂದು ಮಾರ್ಮಿಕವಾಗಿ ನುಡಿದ್ದಾರೆ.


























