ಕಾಪು: ಗ್ರಾಮೀಣ ಕಾಂಗ್ರೆಸ್ ಸಮಿತಿಯ ಫಲಾನುಭವಿ ಸಮಾವೇಶವನ್ನು ಸರ್ಕಾರಿ ಕಾರ್ಯಕ್ರಮದ ರೀತಿಯಲ್ಲಿ ಬಿಂಬಿಸಿ ಜನರನ್ನು ಆಹ್ವಾನಿಸುತ್ತಿರುವುದಕ್ಕೆ ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಜನರನ್ನು ಗೃಹಲಕ್ಷ್ಮಿ ಯೋಜನೆಯ ಕೆವೈಸಿ ಮಾಡುವ ನೆಪದಲ್ಲಿ ಸಮಾವೇಶಕ್ಕೆ ಆಹ್ವಾನಿಸಲಾಗುತ್ತಿದೆ. ಅಲ್ಲದೆ, ಸಮಾವೇಶಕ್ಕೆ ಹಾಜರಾಗದಿದ್ದರೆ ಮುಂದಿನ ಕಂತಿನ ಹಣ ಬರುವುದಿಲ್ಲ ಎಂಬ ರೀತಿಯಲ್ಲಿ ಜನರಲ್ಲಿ ಭೀತಿ ಮತ್ತು ಗೊಂದಲ ಮೂಡಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಹಕ್ಕಾಗಿದ್ದು, ಅದಕ್ಕೂ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಮಾವೇಶಕ್ಕೆ ಹಾಜರಾಗದಿದ್ದರೆ ಯೋಜನೆಯ ಹಣ ಸ್ಥಗಿತಗೊಳ್ಳುತ್ತದೆ ಎಂಬುದಕ್ಕೆ ಅಧಿಕೃತ ಆದೇಶ ಅಥವಾ ಆಧಾರವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ ಸರ್ಕಾರವೇ ಗ್ಯಾರಂಟಿ ಸಮಿತಿಗಳನ್ನು ರಚಿಸಿರುವಾಗ, ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಯೋಜನೆಗಳ ಅನುಷ್ಠಾನದ ನೆಪದಲ್ಲಿ ಜನರನ್ನು ಸೇರಿಸುವ ಅಗತ್ಯವೇನಿದೆ? ರಾಜಕೀಯ ಸಮಾವೇಶಗಳಿಗೆ ಜನರು ಸ್ವಯಂಪ್ರೇರಿತರಾಗಿ ಬರಬೇಕು. ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ತಪ್ಪು ಮಾಹಿತಿ ನೀಡಿ, ಹಣ ಸ್ಥಗಿತಗೊಳ್ಳುವ ಭೀತಿ ಮೂಡಿಸಿ ಜನರನ್ನು ಸೇರಿಸುವ ಪ್ರಯತ್ನ ಸರಿಯಲ್ಲ. ಜನರ ವಿಶ್ವಾಸ ಗಳಿಸಿ ಸಮಾವೇಶ ನಡೆಸಬೇಕೇ ಹೊರತು, ಗೊಂದಲ ಸೃಷ್ಟಿಸಿ ಜನರನ್ನು ಸೇರಿಸುವುದು ನಾಚಿಕೆಗೇಡಿನ ಸಂಗತಿ ಎಂದು ಜಿತೇಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























