ಮಂಗಳೂರು, ಜೂನ್ 26: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ಜೂನ್ 25ರಂದು ಕುಳಾಯಿಗುಡ್ಡೆ ಪ್ರದೇಶದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಆರೋಪಿ ಅಣ್ಣಪ್ಪ ಸ್ವಾಮಿ @ ಮನು (26) ಎಂಬಾತನನ್ನು ಬಂಧಿಸಿ, ಸುಮಾರು ₹1.50 ಲಕ್ಷ ಮೌಲ್ಯದ 15 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ಜಿಪ್ ಲಾಕ್ ಕವರ್ ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹2,10,500 ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಈ ಹಿಂದೆಯೂ ಪಣಂಬೂರು ಹಾಗೂ ಬಜಪೆ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಪ್ರಕರಣಗಳು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಮಸೀದಿಗೆ ಕಲ್ಲು ಎಸೆದ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಬಂಧಿತ ಆರೋಪಿ ಅಣ್ಣಪ್ಪ ಸ್ವಾಮಿ @ ಮನು, ದಿವಂಗತ ಹನುಮಂತಪ್ಪ ಅವರ ಪುತ್ರನಾಗಿದ್ದು, ಮೂಲತಃ ಇಡ್ಯಾ, ಕುಳೈ ಹೊಸಬೆಟ್ಟು ನಿವಾಸಿಯಾಗಿದ್ದಾನೆ. ಪ್ರಸ್ತುತ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.


























