ಪುತ್ತೂರು: ಈ ಬಾರಿಯ ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಬೇಕು ಮತ್ತು ಇದಕ್ಕೆ ಬೇಕಾದ ಸಿದ್ದತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕಳೆದ ವಾರ ಬೆಂಗಳೂರು ಕಂಬಳದ ರುವಾರಿ ಪುತ್ತೂರು ಶಾಸಕ ಅಶೋಕ್ ರೈಗೆ ಸೂಚನೆ ನೀಡಿದ್ದು , ಅದರಂತೆ ಶಾಸಕ ಅಶೋಕ್ಶು ರೈ ಯವರು ಶುಕ್ರವಾರ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಕಂಬಳ ನಡೆಸುವ ಮೂಲಕ ತುಳುನಾಡಿನ ಜನಪದ ಕ್ರೀಡೆಯನ್ನು ಕನ್ನಡಿಗರಿಗೆ ವೀಕ್ಷಣೆಗೆ ಅವಕಾಶ ಮಾಡುವುದರ ಜೊತೆ ವಿಶ್ವದೆಲ್ಲಡೆ ಕಂಬಳವನ್ನು ಪರಿಚಯಿಸುವ ಕೆಲಸವನ್ನು ಶಾಸಕ ಅಶೋಕ್ ರೈ ಅವರು ಮಾಡಿದ್ದರು. ಬೆಂಗಳೂರು ಕಂಬಳ ನಡೆದ ಮಾರನೇ ವರ್ಷ ಮೈಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಚರ್ಚೆ ನಡೆಸಿದ್ದರು. ಇದೀಗ ಕಂಬಳ ಪ್ರೇಮಿ ಡಿ ಕೆ ಶಿವಕುಮಾರ್‌ರವರೇ ಮುಖ್ಯಮಂತ್ರಿಯಾಗಿದ್ದು ಮತ್ತೆ ಮೈಸೂರಿನಲ್ಲಿ ಕಂಬಳ ನಡೆಸುವಂತೆ ಅಶೋಕ್ ರೈ ಅವರಿಗೆ ಸೂಚನೆ ನೀಡಿದ್ದು ಮಾತ್ರವಲ್ಲದೆ ಕಂಬಳ ನಡೆಸುವುದಾದರೆ ಸರಕಾರವೇ ನಿಮ್ಮ ಜೊತೆಗಿರಲಿದೆ ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದರು.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ: ಕಂಬಳದ ಜಾಗ ವೀಕ್ಷಣೆ ಮಾಡುವ ಮುನ್ನ ಶಾಸಕ ಅಶೋಕ್ ರೈ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮೊದಲ ಬಾರಿಗೆ ದಸರಾದಲ್ಲಿ ಕಂಬಳ ಕ್ರೀಡೆ ನಡೆಯಲಿರುವ ಕಾರಣ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವನ್ನು ಬೇಡಿಕೊಂಡರು.
ಜಾಗ ವೀಕ್ಷಣೆ : ಕಂಬಳ ನಡೆಸಲು ಎಕ್ರೆಗಟ್ಟಲೆ ಜಾಗ ಬೇಕಾಗಿದೆ. ಶಾಸಕ ಅಶೋಕ್ ರೈ ಅವರು ಮೈಸೂರಿನ ಸರ್ ಎಂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಬಳಿ ಇರುವ 20 ಎಕ್ರೆ ಜಾಗ ಮತ್ತು ಮೈಸೂರು ಜಯಲಕ್ಷ್ಮೀ ಪುರಂನಲ್ಲಿ ಪ್ರೀಮಿಯಂ ಸ್ಟುಡಿಯೋ ಬಳಿ ಇರುವ 17 ಎಕ್ರೆ ಜಾಗವನ್ನು ವೀಕ್ಷಣೆ ಮಾಡಲಾಗಿದೆ. ಈ ಎರಡು ಜಾಗದಲ್ಲಿ ಯಾವುದು ಸೂಕ್ತ ಎಂಬುದನ್ನು ಪರಿಗಣಿಸಿ ಅಂತಿಮಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಂಬಳ ಪ್ರಮುಖರಾದ ಮುರಳೀಧರ್ ರೈ ಮಟಂತಬೆಟ್ಟು,ಹಾಗೂ ರಾಜೀವ ಶೆಟ್ಟಿ ಎಡ್ತೂರು ಉಪಸ್ಥಿತರಿದ್ದರು.
ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ನಮ್ಮ ಕಂಬಳ ಪ್ರದರ್ಶನ ನಡೆಯಲಿದೆ., ಜಗತ್ತಿನ ವಿವಿಧ ದೇಶಗಳಿಂದ ಮೈಸೂರು ದಸರಾಗೆ ಜನ ಆಗಮಿಸುತ್ತಾರೆ. ಇಂಥಹದೊಂದು ಕಾರ್ಯಕ್ರಮದಲ್ಲಿ ಈ ಬಾರಿ ಕಂಬಳ ನಡೆಯಲಿರುವುದು ಸಂತೋಷದ ವಿಚಾರವಾಗಿದೆ. ಕಂಬಳದ ಜಾಗ ವೀಕ್ಷಣೆಗೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಮುಹೂರ್ಥ ಇಟ್ಟಿದ್ದೇವೆ. ದೇವಿಯ ಅನುಗ್ರಹದಿಂದ ಕಂಬಳ ಸುಸೂತ್ರವಾಗಿ ನಡೆಯಲಿದೆ. ಎರಡು ಕಡೆ ಜಾಗ ವೀಕ್ಷಣೆ ನಡೆದಿದೆ. ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಕಂಬಳ ನಡೆಯುವುದು ಪಕ್ಕಾ.- ಅಶೋಕ್ ರೈ ಶಾಸಕರು ಪುತ್ತೂರು



























