ವಿಟ್ಲ: ವಿಟ್ಲ ಕಸಬಾ ಗ್ರಾಮದ ಕುರುಂಬಳದಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯೊಂದು ಸಂಪೂರ್ಣವಾಗಿ ಹಾನಿಗೊಳಗಾದ ಘಟನೆ ಸಂಭವಿಸಿದೆ. ಆದರೆ, ಗೃಹಿಣಿಯ ಸಮಯಪ್ರಜ್ಞೆಯಿಂದಾಗಿ ಮನೆಯಲ್ಲಿದ್ದ ಬಾಲಕ ಸೇರಿದಂತೆ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುರುಂಬಳ ನಿವಾಸಿ ಇಸುಬು ಬ್ಯಾರಿ ಅವರ ಪುತ್ರ ಕೆ. ಹಮೀದ್ (49) ಅವರ ಮನೆಯಲ್ಲಿ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಹಮೀದ್ ಅವರು ಪೇಟೆಗೆ ತೆರಳಿದ್ದ ವೇಳೆ ಅವರ ಪತ್ನಿ ಖೈರುನ್ನಿಸಾ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಅಪಾಯದ ಪರಿಸ್ಥಿತಿಯನ್ನು ಅರಿತ ಖೈರುನ್ನಿಸಾ ಅವರು ಧೈರ್ಯದಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಮನೆಯಲ್ಲಿದ್ದ ತಮ್ಮ 9 ವರ್ಷದ ಪುತ್ರ ಇಮ್ರಾನ್ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು, ದೃಷ್ಟಿಹೀನರಾಗಿ ಹಾಸಿಗೆ ಹಿಡಿದಿದ್ದ 80 ವರ್ಷದ ಅತ್ತೆ ಮರಿಯಮ್ಮ ಅವರನ್ನು ತಕ್ಷಣ ಮನೆಯಿಂದ ಹೊರಗೆ ಕರೆತಂದು ಅಂಗಳಕ್ಕೆ ತಲುಪಿಸಿದ್ದಾರೆ.
ಈ ವೇಳೆ ಖೈರುನ್ನಿಸಾ ಅವರು ಕೂಗಿಕೊಂಡಿದ್ದು ಕೇಳಿಸಿಕೊಂಡ ನೆರೆಯ ನಿವಾಸಿ ಉಮ್ಮರ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಮೂವರನ್ನೂ ಸುರಕ್ಷಿತವಾಗಿ ಅಂಗಳಕ್ಕೆ ಕರೆತರುವಲ್ಲಿ ನೆರವಾಗಿದ್ದಾರೆ.
ಮೂವರು ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಮನೆಯ ಬಹುತೇಕ ಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಘಟನೆಯ ಮಾಹಿತಿ ತಿಳಿದು ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




























