ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ಹರಿಯುವ ಸೋಮಾವತಿ ಹೊಳೆಯಲ್ಲಿ ಕೊಯ್ಯರು ಗ್ರಾಮದ ನಿವಾಸಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಯ್ಯರು ಗ್ರಾಮದ ಕೊಂಕದಡ್ಡ ನಿವಾಸಿ ಚಿದಾನಂದ ಯಾನೆ ಉಮೇಶ (52) ಅವರ ಮೃತದೇಹ ಇದಾಗಿದೆ. ಚಿಕ್ಕಮಗಳೂರಿನ ಅಲ್ಲೂರು ಎಂಬಲ್ಲಿ ಕೆಲಸಮಾಡಿಕೊಂಡಿದ್ದ ಇವರು ಆ. 5ರಿಂದ ಕೆಲಸಕ್ಕೂ ಹೋಗದೆ ಮನೆಗೂ ಬಾರದೇ ನಾಪತ್ತೆಯಾಗಿದ್ದರೆನ್ನಲಾಗಿದೆ.
ಅವರ ಮೃತ ದೇಹ ಶನಿವಾರದಂದು ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ಹರಿಯುವ ಸೋಮಾವತಿ ಹೊಳೆಯ ಬದಿಯಲ್ಲಿ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಕಾರಣ ಆಕಸ್ಮಿಕವಾಗಿ ಹೊಳೆನೀರಿಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.



























