ಶಿರ್ವ ಮತ್ತು ಉಡುಪಿ (Udupi) ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ನಾಜ್, ಅನಾಸ್, ಅಲ್ತಾಫ್, ಸ್ಪ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ಮಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಮತ್ತು ಶಿವಮೊಗ್ಗ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. ಬಂಧಿತ ಆರೋಪಿಗಳು.
ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಎಂಬಲ್ಲಿ ಕೆಲ ವ್ಯಕ್ತಿಗಳು ಎರಡು ಕಾರು, ಒಂದು ಸ್ಕೂಟರ್‌ನಲ್ಲಿ ಮಾದಕ ವಸ್ತುಗಳನ್ನು ಹೊಂದಿರುವುದಾಗಿ ಬಂದ ಮಾಹಿತಿಯಂತೆ ಸಂಜೆ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 67,714 ರೂ. ಮೌಲ್ಯದ 1354.28 ಗ್ರಾಂ ತೂಕದ ಗಾಂಜಾ, 1,30,960 ರೂ. ಮೌಲ್ಯದ 32.74 ಗ್ರಾಂ ತೂಕದ ಮೆಥಾ ಪಿಟಾಮೈನ್, ಕೃತ್ಯಕ್ಕೆ ಬಳಸಿದ ಎರಡು ಕಾರು, ಒಂದು ಸ್ಕೂಟರ್, 9 ಮೊಬೈಲ್, 2 ತೂಕದ ಮಿಷಿನ್, 75,010 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿರ್ವ ಪೊಲೀಸ್ ಠಾಣಾ ಎಸ್‌ಐ ಅನಿಲ್ ಪ್ರಕರಣದ ತನಿಖೆಯನ್ನು ಮುಂದುವರೆಸಿದಾಗ ಆರೋಪಿಗಳು ಕೇರಳ ರಾಜ್ಯದ ಉಪ್ಪಳ ಎಂಬಲ್ಲಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಆರೋಪಿಗಳು ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್‌ಗಳನ್ನು ಹೊಂದಿದ್ದು, ಕ್ರಿಮಿನಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.


























