ಉಪ್ಪಿನಂಗಡಿ: ಆಟವಾಡಿ ಮನೆಗೆ ತೆರಳುತ್ತಿದ್ದ ಇಬ್ಬರು ಬಾಲಕರನ್ನು ಕಾರಿನಲ್ಲಿ ಬಂದಿದ್ದ ನಾಲೈದು ಮಂದಿಯ ತಂಡವೊಂದು ಕಾರಿನಲ್ಲಿ ಕರೆದೊಯ್ಯಲು ಒತ್ತಾಯಿಸಿ ಬೆನ್ನಟ್ಟಿದ ಕಳವಳಕಾರಿ ಘಟನೆ ಹಿರೇಬಂಡಾಡಿ ಗ್ರಾಮದ ಅಡ್ಕಲ್ ಎಂಬಲ್ಲಿ ನಡೆದಿದೆ.
ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಹಿರೇಬಂಡಾಡಿ ಗ್ರಾಮದ ಮುಡಿಪು ಹಾಗೂ ಕಡ್ಕೊಟ್ಟು ಪರಿಸರದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಶಾಲಾ ಮೈದಾನದಲ್ಲಿ ಆಟವಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಡ್ಕಲ್ ಎಂಬಲ್ಲಿ ಕಾರೊಂದನ್ನು ರಸ್ತೆ ಬದಿ ನಿಲ್ಲಿಸಿದ್ದ ನಾಲ್ಕೈದು ಮಂದಿಯ ತಂಡ, ನಾವೂ ಕೂಡಾ ಮುಂದಕ್ಕೆ ಹೋಗುತ್ತಿದ್ದೇವೆ. ನಿಮ್ಮನ್ನು ಡ್ರಾಪ್ ಮಾಡುತ್ತೇವೆ ಬನ್ನಿ ನಮ್ಮ ಜೊತೆ ಎಂದು ಕರೆದಿದ್ದಾರೆ.
ಬಾಲಕರು ಬರುವುದಿಲ್ಲವೆಂದು ತಿಳಿಸಿದಾಗ ತಂಡದ ಇಬ್ಬರು ಬೆನ್ನಟ್ಟಿದ್ದರೆಂದೂ, ಬೆದರಿದ ಬಾಲಕರು ಓಡಿ ತಪ್ಪಿಸಿಕೊಂಡರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನಲ್ಲಿದ್ದ ಮಂದಿ ಪರಿಸರದಲ್ಲಿ ತುಂಬಾ ಹೊತ್ತು ಕಾರನ್ನು ನಿಲ್ಲಿಸಿ ಸಂಶಯಾಸ್ಪದ ವರ್ತನೆ ತೋರುತ್ತಿದ್ದರೆಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಬಾಲಕರ ಹೆತ್ತವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.




























