ಬೆಳ್ತಂಗಡಿ/ಮಡಂತ್ಯಾರು: ಬೆಳಾಲು ಗ್ರಾಮದ ಮಿನಂದೇಲುವಿನಲ್ಲಿ ಜೂನ್ 12ರಂದು ನಡು ರಸ್ತೆಯಲ್ಲಿ ಸ್ಕೂಟಿಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ದಿಯಾನ್ (7) ಎಂದು ಗುರುತಿಸಲಾಗಿದೆ. ಆತ ಬೆಳಾಲು ನಿವಾಸಿ, ನಿವೃತ್ತ ಮಾಜಿ ಸೈನಿಕ ಮೋಹನ್ ಗೌಡ ಕಾಡಂಡ ಅವರ ಪುತ್ರನಾಗಿದ್ದು, ಉಜಿರೆಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ.
ಜೂನ್ 12ರಂದು ಮೋಹನ್ ಗೌಡ ಅವರು ಪುತ್ರ ದಿಯಾನ್‌ನನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ದಿಯಾನ್‌ಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅವಘಡದಲ್ಲಿ ಮೋಹನ್ ಗೌಡ ಕಾಡಂಡ ಅವರಿಗೂ ಗಾಯಗಳಾಗಿದ್ದರೂ, ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ದಿಯಾನ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾನೆ.
ಬಾಲಕನ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


























