ವಿಟ್ಲ, ಜೂನ್ 26: ಅಕ್ರಮವಾಗಿ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಸಾಗಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿ, ಸುಮಾರು 5.73 ಗ್ರಾಂ ತೂಕದ ಅಂಬರ್‌ಗ್ರೀಸ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 24ರ ರಾತ್ರಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಅಂಬರ್‌ಗ್ರೀಸ್ ಮಾರಾಟಕ್ಕಾಗಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಬೋಳಂತಿಮೊಗರು ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸಿದ ವೇಳೆ ಸ್ಕೂಟರ್‌ನ್ನು ತಡೆದು ಪರಿಶೀಲಿಸಲಾಯಿತು.
ಈ ವೇಳೆ ಬಂಟ್ವಾಳದ ಕರೋಪಾಡಿ ನಿವಾಸಿ ಕುಮುದಾಕ್ಷ (27) ಹಾಗೂ ವಿಟ್ಲ ಕಸಬಾ ನಿವಾಸಿ ಧನು ಕುಮಾರ್ (32) ಅವರ ಬಳಿ ಯಾವುದೇ ಪರವಾನಿಗೆ ಇಲ್ಲದೆ ಸುಮಾರು 5.73 ಗ್ರಾಂ ತೂಕದ ಅಂಬರ್‌ಗ್ರೀಸ್ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಅಂಬರ್‌ಗ್ರೀಸ್, ಎರಡು ಮೊಬೈಲ್ ಫೋನ್‌ಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 140/2026ರಡಿ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ಕಲಂ 51 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



























