ಪುತ್ತೂರು: ಅಪ್ರಾಪ್ತ ವಯಸ್ಕಳನ್ನು ಗರ್ಭವತಿಯನ್ನಾಗಿಸಿದ ಆರೋಪದಡಿ ಪೊಲೀಸರಿಂದ ಬಂಧಿತನಾಗಿದ್ದ ಸಾಲ್ಮರ ನಿವಾಸಿ ತರುಣ್ ಎಂಬಾತನಿಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಘಟನೆಯ ವಿವರ:
ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಗರ್ಭವತಿಯನ್ನಾಗಿಸಿರುವ ಕುರಿತು ಸಾಲ್ಮರ ನಿವಾಸಿ ತರುಣ್ ಎಂಬಾತನ ವಿರುದ್ಧ ಪುತ್ತೂರಿನ ಹೊಟೇಲೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿರುವ ಮಹಿಳೆಯೋರ್ವರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ನನ್ನ ಗಂಡ ಆರು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ನನ್ನ ಮಗಳು 7ನೇ ತರಗತಿ ತನಕ ವ್ಯಾಸಂಗ ಮಾಡಿದ್ದು 8ನೇ ತರಗತಿಯಲ್ಲಿ ಅರ್ಧದಲ್ಲಿ ಬಿಟ್ಟಿದ್ದಾಳೆ.
ಕಳೆದ ಎರಡು ವರ್ಷಗಳಿಂದ ನನ್ನ ಮಗಳಿಗೆ ಪುತ್ತೂರು ಸಾಲ್ಮರ ಮೂಲದ ತರುಣ್ ಎಂಬಾತನ ಪರಿಚಯ ಇದೆ. ಅವನು ನನ್ನ ಮಗಳ ಸ್ನೇಹಿತನಾಗಿದ್ದಾನೆ. ನನಗೂ ಸಹ ಆತನ ಪರಿಚಯ ಇದೆ. ತರುಣ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದಾನೆ. 2025ನೇ ವರ್ಷದ ಮಾರ್ಚ್ ತಿಂಗಳಲ್ಲಿ ನನ್ನ ಮಗಳು ತರುಣ್ ಕೆಲಸ ಮಾಡಿಕೊಂಡಿದ್ದ ಸ್ಥಳವಾದ ಮೂಡಿಗೆರೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು ನನ್ನಲ್ಲಿ ಹೇಳಿದ್ದಾಳೆ. ನಾನು ಅವಳನ್ನು ಕಳುಹಿಸಿಕೊಟ್ಟ ಬಳಿಕ ಅವಳು ನನ್ನ ಜೊತೆ ಫೋನ್ ಕರೆ ಮಾಡಿ ಮಾತನಾಡಿಕೊಂಡಿದ್ದಳು. ಅವಳು ಅಲ್ಲಿ ಚೆನ್ನಾಗಿರುವ ವಿಚಾರ ಹೇಳಿಕೊಂಡಿದ್ದಳು.
ನಂತರ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಮಗಳು ನನಗೆ ಫೋನ್ ಕರೆ ಮಾಡಿ ತಾನು 7 ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಳು. ಮಗಳಿಗೆ 19 ವರ್ಷ ಪ್ರಾಯವಾಗಿದೆ ಎಂದು ನಾನು ಭಾವಿಸಿಕೊಂಡಿದ್ದು ಅವರಿಬ್ಬರಿಗೆ ಮುಂದಕ್ಕೆ ಮದುವೆ ಮಾಡುವ ಎಂದು ಆಲೋಚಿಸಿದ್ದೆ. ನನಗೆ ವಿದ್ಯಾಭ್ಯಾಸ ಇಲ್ಲದಿರುವುದರಿಂದ ಮಗಳ ಜನ್ಮ ದಿನಾಂಕ ನೆನಪಿರಲಿಲ್ಲ. ಮಾರ್ಚ್ 14ರಂದು ನನ್ನ ಮಗಳು ನನಗೆ ಕರೆ ಮಾಡಿ ಅವಳು ವೈದ್ಯರಲ್ಲಿ ಪರೀಕ್ಷಿಸುವುದಕ್ಕಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಬರುತ್ತಿರುವುದಾಗಿ ತಿಳಿಸಿದ್ದಳು. ನಂತರ ಮಗಳು ಪುತ್ತೂರಿಗೆ ಬಂದು ವೈದ್ಯರಲ್ಲಿ ಹೋದಾಗ ವೈದ್ಯರು ಜನನ ದಿನಾಂಕ ಸರಿ ಇಲ್ಲ ಎಂದು ತಿಳಿಸಿದ್ದಾರೆ.
ಸರಿಯಾದ ದಾಖಲಾತಿಯನ್ನು ತರುವಂತೆ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಅದೇ ದಿನ ನನ್ನಲ್ಲಿ ಪೊಲೀಸರು ವಿಚಾರಿಸಿದಾಗ ನನ್ನ ಮಗಳ ಜನ್ಮ ದಿನಾಂಕದ ಬಗ್ಗೆ ನನಗೆ ಗೊಂದಲ ಇದ್ದು ಅವಳಿಗೆ 19 ವರ್ಷವಾಗಿದೆ ಎಂದು ನಾನು ಹೇಳಿದ್ದೆ. ಅವಳ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ 06.07.2009 ಎಂದು ಇರುವುದಾಗಿ ಆ ಸಮಯ ತಿಳಿಸಿದ್ದೆ. ನನ್ನಲ್ಲಿ ಮಗಳ ಜನ್ಮ ದಿನಾಂಕದ ದಾಖಲಾತಿ ಯಾವುದೂ ಇರಲಿಲ್ಲ. ಶಾಲೆಯಲ್ಲಿ ಮಗಳ ಜನ್ಮ ದಿನಾಂಕದ ದಾಖಲಾತಿಯನ್ನು ಪರಿಶೀಲಿಸಿದಾಗ ಅವಳ ಜನ್ಮ ದಿನಾಂಕ 06.07.2010 ಆಗಿರುತ್ತದೆ. ಆದುದರಿಂದ ಅಪ್ರಾಪ್ತ ವಯಸ್ಕಳಾದ ನನ್ನ ಮಗಳೊಂದಿಗೆ ತರುಣ್ ದೈಹಿಕ ಸಂಪರ್ಕ ಮಾಡಿದ ಪರಿಣಾಮ ಅವಳು 7 ತಿಂಗಳ ಗರ್ಭಿಣಿಯಾಗಿದ್ದಾಳೆ.
ಆದ್ದರಿಂದ ತರುಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ್ದ ಪುತ್ತೂರು ಮಹಿಳಾ ಠಾಣೆಯ ಠಾಣಾಧಿಕಾರಿಯವರು ಝೀರೋ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಈ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ ಎಂಬ ಕಾರಣಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಡಿಸಿಆರ್‌ಇ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು.
ಚಿಕ್ಕಮಗಳೂರು ಡಿಸಿಆರ್‌ಇ ಠಾಣೆಯಿಂದ ಈ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಕಲಂ ೬೫(೧) ಬಿಎನ್‌ಎಸ್ ಹಾಗೂ ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತರುಣ್‌ನನ್ನು ಬಂಧಿಸಿದ್ದರು. ಬಂಧಿತ ತರುಣ್‌ಗೆ ಇದೀಗ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಪ್ರಸಾದ್ ಕುಮಾರ್ ರೈ ಉಪ್ಪಿನಂಗಡಿ, ಶ್ರೀಹರಿ ಪುತ್ತೂರು ಮತ್ತು ಕೃಷ್ಣದೇವ ಮಂಗಳೂರು ವಾದಿಸಿದ್ದರು.
























