ಉಡುಪಿ: ಕಳೆದ 2 ವರ್ಷದಿಂದ ತನ್ನದಲ್ಲದ ತಪ್ಪಿಗೆ, ವಿದೇಶಿ ನೆಲದಲ್ಲಿ ಜೈಲಿನಲ್ಲಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬೀಜಾಡಿಯ ಹರೀಶ್ ಬಂಗೇರ ಇಂದು ಮುಂಜಾನೆ ತಾಯ್ನಾಡಿಗೆ ಮರಳಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪತ್ನಿ, ಮಗು ಸಹಿತ ಗೆಳೆಯರು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ಹರೀಶ್ ಬಂಗೇರ ನಿನ್ನೆ ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ಹೊರಟು ದೋಹಾ ಮೂಲಕ ಇಂದು ಮುಂಜಾನೆ ಬೆಂಗಳೂರು ವಿಮಾನ ತಲುಪಿದ್ದಾರೆ. ಅಲ್ಲಿಂದ ಕಾರಿನಲ್ಲಿ ಹುಟ್ಟೂರು ಕಡೆಗೆ ಹೊರಟಿದ್ದಾರೆ. ಉಡುಪಿ ಜಿಲ್ಲೆ ತಲುಪುವ ಅವರು, ಕಟಪಾಡಿಯಲ್ಲಿ ಕೊರಗಜ್ಜ ಕ್ಷೇತ್ರಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಹರೀಶ್ ಬಂಗೇರ ಸೌದಿಯಲ್ಲಿ ಉದ್ಯೋಗಿಯಾಗಿದ್ದರು.2019ರ ಡಿಸೆಂಬರ್ ನಲ್ಲಿ ಅವರ ಹೆಸರಲ್ಲಿ ಕಿಡಿಗೇಡಿಗಳು ಫೇಸ್‌ಬುಕ್ ನಕಲಿ ಖಾತೆ ತೆರೆದು, ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಈ ಆರೋಪದಲ್ಲಿ ಬಂಗೇರ ಸೌದಿ ಪೊಲೀಸರಿಂದ ಬಂಧಿತರಾಗಿದ್ದರು. ನಂತರ ಉಡುಪಿಯಲ್ಲಿ ಬಂಗೇರರ ಪತ್ನಿ, ಹರೀಶ್ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ತೆರೆದ ಪ್ರಕರಣ ಸಂಬಂಧ ಉಡುಪಿ ಸೆನ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ತನಿಖೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳಾದ ಮೂಡುಬಿದಿರೆಯ ಅಬ್ದುಲ್ ಹುಯೇಸ್ ಹಾಗೂ ತುವೇಸ್‌ನನ್ನು ಬಂಧಿಸಿದ್ದರು. ಈ ಸಹೋದರರಿಬ್ಬರು ಹರೀಶ್ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅನಂತರ ಅದರ ಸ್ಕ್ರೀನ್ ಶಾಟ್ ತೆಗೆದು ಖಾತೆಯನ್ನು ಡಿಲೀಟ್ ಮಾಡಿದ್ದರು.
ಪ್ರಸ್ತುತ ಸೌದಿಯ ಜೈಲಿನಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ ಹರೀಶ್ ಬಂಗೇರ ಅವರು ಕೋವಿಡ್ ನಿಯಮಾವಳಿಯಂತೆ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ.




























