ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ಮೊದಲ ಬಹು ರಾಷ್ಟ್ರೀಯ ಆಟೋಮೋಟಿವ್ ಕಂಪೆನಿಗಳಲ್ಲಿ ಫೋರ್ಡ್ ಒಂದು. 1994ರಲ್ಲಿ ಭಾರತಕ್ಕೆ ಬಂದಿದ್ದ ಅದು, 27 ವರ್ಷಗಳ ಬಳಿಕ ಭಾರತದಲ್ಲಿ ತನ್ನ ಕಾರು ಹಾಗೂ ಎಸ್ಯುವಿ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ.
ಕಳೆದ ಸುಮಾರು ಹತ್ತು ವರ್ಷಗಳಿಂದ ಫೋರ್ಡ್, ಭಾರತದ ಮಾರುಕಟ್ಟೆಯಲ್ಲಿ 2 ಬಿಲಿಯನ್ ಡಾಲರ್ಗೂ ಅಧಿಕ ನಷ್ಟ ಅನುಭವಿಸಿದೆ. ಈಗ ಭಾರತದಲ್ಲಿನ ಘಟಕಗಳನ್ನು ಸ್ಥಗಿತಗೊಳಿಸುವುದರಿಂದ ಅದರ ಸುಮಾರು 4,000 ಉದ್ಯೋಗಿಗಳ ಸ್ಥಿತಿ ಅತಂತ್ರವಾದಂತಾಗಿದೆ.
ಗುಜರಾತ್ನ ಸನಂದ್ನ ರಫ್ತು ವಾಹನಗಳ ಉತ್ಪಾದನಾ ಘಟಕವನ್ನು 2021ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಮುಚ್ಚಲಾಗುತ್ತದೆ. ಚೆನ್ನೈನ ಎಂಜಿನ್ ಉತ್ಪಾದನಾ ಘಟಕವನ್ನು 2022ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸ್ಥಗಿತಗೊಳಿಸಲಾಗುವುದು.
ಫೋರ್ಡ್ಗೂ ಕೆಲವು ವರ್ಷಗಳ ಮುನ್ನ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಅಮೆರಿಕದ ವಾಹನ ದಿಗ್ಗಜ ಜನರಲ್ ಮೋಟಾರ್ಸ್ 2017ರಲ್ಲಿ ಭಾರತದಲ್ಲಿನ ತನ್ನ ಕಾರು ಮಾರಾಟವನ್ನು ಸ್ಥಗಿತಗೊಳಿಸಿತ್ತು. ಹಾರ್ಲೆ ಡೇವಿಸನ್ ಕೂಡ ಭಾರತದ ಮಾರುಕಟ್ಟೆಗೆ ಗುಡ್ ಬೈ ಹೇಳಿತ್ತು.
ನಷ್ಟದಿಂದ ಹೊರಬರಲು ಪಾಲುದಾರಿಕೆ, ಪ್ಲಾಟ್ಫಾರ್ಮ್ ಹಂಚಿಕೆ, ಇತರೆ ಒಇಎಂಗಳೊಂದಿಗೆ ಉತ್ಪಾದನಾ ಗುತ್ತಿಗೆ ಹೊಂದುವುದು ಮತ್ತು ತನ್ನ ಉತ್ಪಾದನಾ ಘಟಕಗಳ ಮಾರಾಟದಂತಹ ವಿವಿಧ ಆಯ್ಕೆಗಳ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ದೀರ್ಘಾವಧಿ ಲಾಭದ ಸುಸ್ಥಿರ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಲವು ವರ್ಷಗಳ ಗಣನೀಯ ನಷ್ಟವನ್ನು ಗಮನಿಸಿ ಅನಿವಾರ್ಯವಾಗಿ ಘಟಕಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫೋರ್ಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ ತಿಳಿಸಿದ್ದಾರೆ.
ದಿಲ್ಲಿ, ಚೆನ್ನೈ, ಮುಂಬಯಿ, ಸನಂದ್ ಮತ್ತು ಕೋಲ್ಕತಾಗಳಲ್ಲಿರುವ ತನ್ನ ಪ್ರಮುಖ ಡಿಪೋಗಳನ್ನು ಫೋರ್ಡ್ ಮುಂದುವರಿಸಲಿದ್ದು, ಮಾರಾಟ ಹಾಗೂ ಬಿಡಿಭಾಗಗಳ ಸೇವೆ ಮತ್ತು ಸೇವಾ ನೆರವುಗಳ ವ್ಯವಹಾರಕ್ಕೆ ನೆರವು ನೀಡಲಾಗುವುದು ಎಂದು ಕಂಪೆನಿ ಹೇಳಿದೆ.
ಫೋರ್ಡ್, ಭಾರತದಲ್ಲಿ ಫಿಗೋ, ಆಸ್ಪೈರ್, ಫ್ರೀಸ್ಟೈಲ್, ಇಕೋ ಸ್ಪೋರ್ಟ್, ಎಂಡೆವರ್- ಐದು ಮಾಡೆಲ್ಗಳನ್ನು ಮಾರಾಟ ಮಾಡುತ್ತಿದೆ. 7.75 ಲಕ್ಷ ರೂ ದಿಂದ 33.81 ಲಕ್ಷ ರೂ ಶ್ರೇಣಿಯ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯ. ಕೆಲವು ವರ್ಷಗಳ ಹಿಂದೆ ಎಸ್ಯುವಿ ಪರಿಣತ ಮಹೀಂದ್ರಾ & ಮಹೀಂದ್ರಾ ಜತೆಗೂಡಿ ನಷ್ಟದಿಂದ ಹೊರಬರಲು ಫೋರ್ಡ್ ಪ್ರಯತ್ನಿಸಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣ ಉಂಟಾದ ಸಮಸ್ಯೆಗಳಿಂದಾಗಿ 2021ರ ಜನವರಿಯಲ್ಲಿ ಎರಡೂ ಕಂಪೆನಿಗಳು ಪಾಲುದಾರಿಕೆ ಮುರಿದುಕೊಳ್ಳಲು ನಿರ್ಧರಿಸಿದ್ದವು.