ಪುತ್ತೂರು: ಕಳೆದ 70 ವರ್ಷಗಳ ಕಾಂಗ್ರೆಸ್ ಆಡಳಿತವು ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ, ದೇಶದ ಬಡ ಜನರ ಕಲ್ಯಾಣಕ್ಕಾಗಿ ಹಲವಾರು ಜನಪರ ಕಾರ್ಯಕ್ರಮ ಕೊಟ್ಟಿದೆ, ಪ್ರಧಾನಿ ಇಂದಿರಾಗಾಂಧಿಯವರು ಕ್ರಾಂತಿಕಾರಿಯಾದಂತ ಭೂ ಮಸೂದೆ ಕಾನೂನು ತಂದು ಗೇಣಿದಾರನಿಗೆ ಭೂಮಿ ಹಂಚಿರುತ್ತಾರೆ, ಶ್ರೀಮಂತರ ಕೈಯಲ್ಲಿದ್ದ ಬ್ಯಾಂಕ್ ಅನ್ನು ರಾಷ್ಟ್ರೀಕರಣ ಮಾಡಿ ದೇಶದ ಬಡವರಿಗೆ ಬ್ಯಾಂಕ್ ಸೌಲಭ್ಯ ಸಿಗುವಂತೆ ಮಾಡಿದ್ದಾರೆ, ಜೀತ ಪದ್ಧತಿ ಮುಕ್ತಗೊಳಿಸುವ ಕಾನೂನು ತಂದಿರುತ್ತಾರೆ, ಪ್ರತಿಯೊಬ್ಬನಿಗೂ ವಾಸಿಸಲು ನಿವೇಶನ ಮತ್ತು ಮನೆ ಒದಗಿಸಲು ಜನತಾ ಕಾಲೋನಿ ಹೆಸರಿನ ಯೋಜನೆಯ ತಂದಿರುವುದರಿಂದ ತಾಲೂಕಿನ ಎಲ್ಲಾ ಕಡೆ ಜನತಾ ಕಾಲೋನಿ ನಿರ್ಮಾಣವಾಗಿರುತ್ತದೆ.
ಪ್ರತಿ ಬಡವನ ಮನೆಗೆ ಉಚಿತ ವಿದ್ಯುತ್ ಒದಗಿಸಲು ಭಾಗ್ಯ ಜ್ಯೋತಿ ಕಾರ್ಯ ಕ್ರಮ ತಂದಿರುತ್ತಾರೆ, ಕಾಂಗ್ರೆಸ್ ಸರಕಾರ ಜನತೆಯ ಒಳಿತಿಗಾಗಿ ಹಲವಾರು ಯೋಜನೆಗಳನ್ನು ತಂದಿರುತ್ತದೆ, ಇದರ ಬಗ್ಗೆ ಜನತೆಗೆ ತಿಳಿಸಿ ಎಂದು ಮಾಜಿ ತಾಲೂಕು ಬೋರ್ಡ್ ಅಧ್ಯಕ್ಷ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಿರಿಯರಾದ ಸಾಮೆತಡ್ಕ ಗೋಪಾಲ ಕೃಷ್ಣ ಭಟ್ ಹೇಳಿದರು. ಅವರು ನಗರದ ಸಾಮೆತಡ್ಕ ವಲಯದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ಪಕ್ಷದ ಬೆಳವನಣಿಗೆ ಸಾಧ್ಯ, ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ಕೊಡುವ ಕೆಲಸ ಮಾಡುತ್ತಿದ್ದೇವೆ, ಬೂತ್ ಸಮಿತಿಯವರು ಕಡ್ಡಾಯವಾಗಿ ಪ್ರತಿ ತಿಂಗಳು ಬೂತ್ ಸಮಿತಿ ಸಭೆ ನಡೆಸಬೇಕು,ಪ್ರತಿ ಸಭೆಗೂ ಬ್ಲಾಕ್ ಮಟ್ಟದ ನಾಯಕರುಗಳು ಭಾಗಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಬಿಜೆಪಿಗರು ಈಗಲೂ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಕಾರ್ಯಕರ್ತರು ವಾಸ್ತವ ವಿಷಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮಾತನಾಡಿ, ನಗರದ ವ್ಯಾಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಸಲುವಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಣೆ ಕೆಲಸಕ್ಕೆ ತೊಡಗಿಸಿ ಕೊಂಡಿದ್ದೇವೆ, ನಗರ ಸಭೆಯಲ್ಲಿ ಕಾಂಗ್ರೆಸ್ ಆಡಳಿತ ಹಾಗೂ ಬಿಜೆಪಿ ಆಡಳಿತದ ಕಾರ್ಯ ಶೈಲಿಯನ್ನು ಜನರು ತುಲನೆ ಮಾಡಿ ನೋಡುತ್ತಿದ್ದಾರೆ, ಕಾಂಗ್ರೆಸ್ ಆಡಳಿತ ಪುತ್ತೂರು ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ, ಆದರೆ ಬಿಜೆಪಿ ಆಡಳಿತ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ ಎಂದರು.

ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ ರರ ಮನೆಯಲ್ಲಿ ಸಭೆ ನಡೆಯಿತು. ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕೇರೇನಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಭೆಯಲ್ಲಿ ಬ್ಲಾಕ್ ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್,ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ದಾಮೋದರ್ ಭಂಡಾರ್ಕರ್, ನಗರ ಸಭಾ ಮಾಜಿ ಸದಸ್ಯೆ ಶ್ರೀಮತಿ ಉಷಾ ಧನಂಜಯ, ಕಾಂಗ್ರೆಸ್ ಸ್ಥಳೀಯ ಹಿರಿಯ ಮುಖಂಡರಾದ ಐತಪ್ಪ ಆಚಾರ್ಯ, ಆನಂದ ಶೆಟ್ಟಿ ಸುರೇಶ್ ಸಾಲಿಯಾನ್,ಶಿರಾಜ್ ಸಾಮೆತಡ್ಕ, ಜೇರೋಮ್ ಪುಡ್ತಾದೊ ಕಜೆ, ಅರುಣ್ ಪಿಂಟೋ, ಜಯಕರ, ದಿನೇಶ್ ಕಾಮತ್, ನಾರಾಯಣ ಕುಡ್ವ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮೆತಡ್ಕದ ಎರಡು ಬೂತ್ ಗಳಿಗೆ ಬೂತ್ ಸಮಿತಿ ರಚನೆ ಮಾಡಲಾಯಿತು.





























