ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್‌ಗೆ ಅತಿಥಿಯಾಗಿ ಬಂದ ಮಹಿಳೆಯೊಬ್ಬಳು ಏಕಾಂಗಿಯಾಗಿ ಸಾಹಸ ಕ್ರೀಡೆಗಳನ್ನು ಆಡುವ ಕೆರೆಗೆ ಬಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪಾಯಕ್ಕೆ ಒಳಗಾದ ಮಹಿಳೆಯನ್ನು ಮಂಗಳೂರು ಮೂಲದ ವೈದ್ಯೆ ನೇಝೀ ಫೆರ್ನಾಂಡೀಸ್ (೩೨) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಫಾರ್ಮ್ ಆಗಮಿಸಿದ ಈಕೆ ಕೆರೆಯ ಸಮೀಪಕ್ಕೆ ಹೋಗಿದ್ದಾರೆ. ತುಂಬಾ ಸಮಯವಾದರೂ ಬಾರದ ಸಂದರ್ಭ ಕೆರೆಯಲ್ಲಿ ಹುಡುಕಾಡಿ ನೀರಿನಡಿಗೆ ಹೋಗಿದ್ದ ಈಕೆಯ ದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್. ಇ. ಅವರ ತಂಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ಬಾರದ ಹಿನ್ನಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.
ಕೆಲವು ದಿನಗಳ ಹಿಂದೆಯೂ ಭೇಟಿ..?
ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳದ ನೇಝೀ ಫೆರ್ನಾಂಡೀಸ್ ಕೃಷಿ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ವಾರಣಾಸಿ ಫಾರ್ಮ್ ಗೆ ಕೆಲವು ದಿನಗಳ ಹಿಂದೆಯೂ ಆಗಮಿಸಿದ್ದರು. ಎರಡು ದಿನ ಊರಿಗೆ ಹೋಗಿ ಮತ್ತೆ ಬಂದು ಇಲ್ಲೇ ವಾಸ್ತವ್ಯ ನಡೆಸುತ್ತಿದ್ದರು.
ಕೆರೆಯಲ್ಲಿ ಶೋಧ:
ಮಹಿಳೆ ಒಂಟಿಯಾಗಿ ಬಂದು ಬಟ್ಟೆ ಹಾಗೂ ಪಾದರಕ್ಷೆಯನ್ನು ಕಟ್ಟೆಯ ಮೇಲೆ ಇಟ್ಟು ಕೆರೆಯಲ್ಲಿ ನೀರಿನಾಟಕ್ಕೆ ಇಳಿದಿರಬಹುದೆನ್ನಲಾಗಿದೆ. ಈ ಸಂದರ್ಭ ನೀರಿನ ಒಳಗೆ ಮುಳುಗಿದ್ದು, ಸಮಯವಾದರೂ ಮರಳಿ ಬಾರದ ಸಂದರ್ಭ ಕೆರೆಯ ಕಡೆಗೆ ಹೋಗುವುದನ್ನು ಗಮನಿಸಿದ ಈಜು ಕಲಿಯುವ ವಿದ್ಯಾರ್ಥಿಗಳು ಕೆರೆಯ ಬಳಿಗೆ ಬಂದು ಕೆರೆಯಲ್ಲಿ ಹುಡುಕಾಡಿದಾಗ ದೇಹ ಪತ್ತೆಯಾಗಿದೆ.




























