ಸುರತ್ಕಲ್: ವಾಹನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ವೀಡಿಯೊದಲ್ಲಿ ಗುಂಪೊಂದು ಕಾರಲ್ಲಿ ಕೂತಿರುವ ತಂಡದ ಕೆಲವರನ್ನು ಅಶ್ಲೀಲ ಪದಗಳಿಂದ ನಿಂದಿಸುತ್ತಿರುವುದು ಗೋಚರಿಸುತ್ತದೆ. ಸುರತ್ಕಲ್ ಟೋಲ್ ಗೇಟ್ ಬಳಿ ಸೆ.26 ರ ಸಂಜೆ ಈ ಘಟನೆ ನಡೆದಿದೆ. ನೈತಿಕ ಪೊಲೀಸ್ ಗಿರಿ ಈ ಘಟನೆಗೆ ಸಂಬಂಧಿಸಿ, ಸುರತ್ಕಲ್ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ದೇರಳಕಟ್ಟೆಯ ಕಾಲೇಜಿನ ವಿದ್ಯಾರ್ಥಿನಿಯರು ಬೇರೆ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳೊಂದಿಗೆ ಸಂಚರಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಸವಿಯೊ ಟಿ ಅಲೋನ್ಸೊ (20) ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನನ್ವಯ ಪ್ರೀತಂ ಶೆಟ್ಟಿ, ಅರ್ಶಿತ್, ಶ್ರೀನಿವಾಸ್, ರಾಕೇಶ್ ಮತ್ತು ಅಭಿಷೇಕ್ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.