ಕುಂದಾಪುರ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಕುಂದಾಪುರ ನಗರ ಠಾಣಾಧಿಕಾರಿ ಹಲ್ಲೆಗೈದಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಕುಂದಾಪುರ ನಗರ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಅ.08 ರ ತಡರಾತ್ರಿ ನಡೆದಿದೆ.
ಅನ್ಯಕೋಮಿನ ಯುವಕನೊಬ್ಬ ಚೈತ್ರಾ ಕುಂದಾಪುರ ಅವರ ಬಗ್ಗೆ ಅವಹೇಳನಕಾರಿ ವ್ಯಾಟ್ಸಪ್ ಸ್ಟೇಟಸ್ ಹಾಕಿದ್ದು, ಆ ಹುಡುಗ ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಜಗಳ ನಡೆದಿತ್ತು.
ಘಟನೆಯ ಬಳಿಕ ಹಿರಿಯರ ನೇತೃತ್ವದಲ್ಲಿ ನಗರ ಠಾಣೆಯಲ್ಲಿ ರಾಜಿ ಮಾಡಿಕೊಂಡಿದ್ದ ಎರಡು ಕಡೆಯವರು, ಠಾಣೆಯಲ್ಲಿರುವಾಗಲೇ ನಗರ ಠಾಣಾಧಿಕಾರಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಹಲ್ಲೆಗೈದಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕುಂದಾಪುರಕ್ಕೆ ಆಗಮಿಸಿ ತಡರಾತ್ರಿ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಘಟನೆಯ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು. ನಂತರ ಕಾರ್ಯಕರ್ತರು ಠಾಣೆಯಿಂದ ತೆರಳಿದರು ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರು, ಭಾಜಪ ಮುಖಂಡರು ಉಪಸ್ಥಿತರಿದ್ದರು.