ಮಕರ ಮಾಸದ ಮೊದಲನೆಯ ದಿನ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಾದಾರ್ಪಣೆಗೈಯುವ ಶುಭ ದಿನ, ಈ ಪರಿವರ್ತನೆಯ ವಿಶೇಷ ದಿನದಂದು ಕೆಮ್ಮಾಯಿಯಲ್ಲಿ ಒಂದು ವಿಸ್ಮಯಕಾರಿ ಘಟನೆ ನಡೆದಿದೆ. ಅದೇನೆಂದರೆ ನಾಗರ ಹಾವೊಂದು ತನ್ನ ಹಳೆಯ ಚರ್ಮ (ಪೊರೆ) ಕಳಚಿ ಹೊಸ ಶುಭ್ರವಾದ ಚರ್ಮ ಧರಿಸಿರುವುದು.
ಇದರಲ್ಲೇನಿದೆ ವಿಸ್ಮಯ ಇದೊಂದು ಪ್ರಕೃತಿ ಸಹಜವಾದ ಕ್ರಿಯೆ ಎಂದು ನೀವು ಅರಿತಿರಬಹುದು. ಅದು ಸತ್ಯವಾದರೂ ಇದು ನಡೆದಿರುವುದು ಅತಿ ಪಾವಿತ್ರ್ಯವಾದ ಶ್ರೇಷ್ಠ ಅಶ್ವತ್ಥನಾರಾಯಣನ ಹಾಗೂ ಶನೈಶ್ಚರನ ಸಾನಿಧ್ಯವಿರುವ ಕೆಮ್ಮಾಯಿ ಶ್ರೀ ಓಂ ಅಶ್ವತ್ಥ ಕಟ್ಟೆಯಲ್ಲಿ. ಓಂ ಅಶ್ವತ್ಥ ಕಟ್ಟೆ ಕೆಮ್ಮಾಯಿ ಈ ಒಂದು ಸಾನ್ನಿಧ್ಯದ ಬಗ್ಗೆ ತಿಳಿದಿರದ ಜನರು ತೀರಾ ವಿರಳ. ಕಳೆದ 23 ವರ್ಷಗಳಿಂದ ಶ್ರೀ ವಿಷ್ಣು ಯುವಕ ಮಂಡಲ (ರಿ.) ಕೆಮ್ಮಾಯಿ ಇದರ ವತಿಯಿಂದ ನಡೆಸಿಕೊಂಡು ಬಂದಿರುವ ಅಶ್ವತ್ಥ ಮಹೋತ್ಸವ ಶನೇಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯ ದಿನದಂದೇ ಅಶ್ವತ್ಥ ಕಟ್ಟೆಯಲ್ಲಿ ನೆಲೆಸಿರುವ ಪವಿತ್ರ ನಾಗರಹಾವು ಮಹಾಪೂಜೆ ನಡೆಯುವ ಸಂದರ್ಭದಲ್ಲಿ ತನ್ನ ಹಳೆಯ ಚರ್ಮವನ್ನು ಕಳಚಿರುವುದು ಒಂದು ಪವಾಡ ಸದೃಶವಾದ ವಿಸ್ಮಯ ಘಟನೆಯಾಗಿದೆ. ಈ ಸಾನ್ನಿಧ್ಯದ ಬಗ್ಗೆ ಇನ್ನೂ ಸ್ವಲ್ಪ ವಿವರ ನೀಡುವುದಾದರೆ ಕಳೆದ 23 ವರ್ಷಗಳಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಅಶ್ವತ್ಥ ಸಾನ್ನಿಧ್ಯದಲ್ಲಿ ನಿತ್ಯ ನಂದಾದೀಪ ಬೆಳಗುತ್ತಿದೆ ಪ್ರತಿ ಶನಿವಾರ ಹಾಗೂ ಭಗವದ್ಭಕ್ತರು ಇಚ್ಚಿಸಿದ ವಿಶೇಷ ದಿನದಂದು ಶನಿಪೂಜೆ ಅಶ್ವತ್ಥ ಪೂಜೆ ವಿಶೇಷ ಪೂಜೆ ನಡೆಸುವ ವ್ಯವಸ್ಥೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಕಷ್ಟ ಕಾರ್ಪಣ್ಯ ಅನೇಕ ತೊಂದರೆಗಳಿಂದ ಬಳಲುತ್ತಿದ್ದ ಅದೆಷ್ಟೋ ಭಕ್ತರು ಇಲ್ಲಿ ಪೂಜೆಯನ್ನು ಮಾಡಿಸಿ ಕೃತಾರ್ಥರಾಗಿ ಒಳಿತನ್ನ ಕಂಡ ಸಾವಿರಾರು ನಿದರ್ಶನಗಳಿವೆ. ಜನವರಿ 15ರಂದು 24 ನೇ ವರ್ಷದ ವಾರ್ಷಿಕೋತ್ಸವ ಅಶ್ವತ್ಥ ಮಹೋತ್ಸವ ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂರಾರು ಭಕ್ತರ ಎದುರೇ ಈ ಘಟನೆ ನಡೆದಿರುವುದು ಈ ಸಾನಿಧ್ಯದ ಮಹತ್ವವನ್ನು ಮತ್ತಷ್ಟು ತೋರಿಸಿಕೊಟ್ಟಿದೆ.