ಮೂಡಿಗೆರೆ: ಚಾರ್ಮಾಡಿ ಘಾಟ್‌ನ ಅಲೇಕಾನ್ ಜಲಪಾತದ ಬಳಿ ಯುವಕರ ತಂಡವೊಂದು ಸೆಲ್ಫಿ ತೆಗೆಯುತ್ತಿದ್ದ ವೇಳೆ ಜೊತೆಗಿದ್ದ ಯುವಕನೋರ್ವ ಜಾರಿ ಬಿದ್ದು ಕೈ ಮತ್ತು ಕಾಲು ಮುರಿತಕ್ಕೊಳಗಾದ ಘಟನೆ ಅ.20 ರಂದು ಸಂಜೆ ನಡೆದಿದೆ.
ಬಿದ್ದು ಕೈ ಮತ್ತು ಕಾಲು ಮುರಿತಕ್ಕೊಳಗಾದ ಯುವಕನನ್ನು ಅಭಿಲಾಶ್ (22) ಎಂದು ಗುರುತಿಸಲಾಗಿದೆ. ಮೂಲತಃ ಪಾವಗಡದವರಾದ ಯುವಕರ ತಂಡವೊಂದು ಜಲಪಾತ ವೀಕ್ಷಣೆಗೆ ತೆರಳಿದ್ದು, ಈ ವೇಳೆ ಅಭಿಲಾಶ್ 80 ಅಡಿ ಆಳಕ್ಕೆ ಜಾರಿ ಬಿದ್ದಿದ್ದು, ಕೂಡಲೇ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ವೃತ್ತಿಯಲ್ಲಿ ಚಾಲಕನಾಗಿರುವ ಅಭಿಲಾಶ್, ಮೂವರು ಯುವಕ ಜೊತೆಗೆ ಗೂಡ್ಸ್ ವಾಹನದಲ್ಲಿ ಜಲಪಾತ ವೀಕ್ಷಣೆಗೆ ಬಂದಿದ್ದು, ಮೂವರು ಯುವಕರು ಜಲಪಾತದಲ್ಲಿ ಸೆಲ್ಪಿ ತೆಗೆಯುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ವಾಹನದ ಕೀ ಸಹಿತ ಮೊಬೈಲ್ ನೀರು ಪಾಲಾಗಿದ್ದು, ವಿಷಯ ತಿಳಿದು ತಕ್ಷಣ ಬಣಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಜಲಪಾತದಲ್ಲಿ ಮೊದಲು ಹಲವು ದುರ್ಘಟನೆಗಳು ಸಂಭವಿಸಿದ್ದು, ಇಲ್ಲಿ ಮೊದಲಿದ್ದ ಸೂಚನಾ ಫಲಕ ಗಾಳಿಮಳೆಗೆ ಮುರಿದುಬಿದ್ದಿದ್ದು, ಬಳಿಕ ಇಲ್ಲಿ ಸೂಚನಾ ಫಲಕ ಅಳವಡಿಸಲಾಗಿಲ್ಲ. ಸದ್ಯ ಇಂತಹ ಘಟನೆಗಳು ಮರುಕಳಿಸದಿರಲು ಸೂಚನಾ ಫಲಕ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.