ಬೆಳ್ಳಾರೆ: 2ನೇ ತರಗತಿಯ ಪುಟಾಣಿಗಳು ತಾವೇ ಹಾರೆ ಹಿಡಿದು ಕೆಸರನ್ನು ಬದಿಗೆ ಸರಿಸಿದ ಘಟನೆ ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಮಂಡೇಪು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಈ ವರದಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜಾಗೃತಿಗೆ ಕಾರಣವಾಗಿದೆ.
ಪಂಚಾಯತ್ ಅಧಿಕಾರಿಗಳಲ್ಲದೆ ಸುಳ್ಯದ ನ್ಯಾಯಾಧೀಶರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆಯ ಒಳಗೆ ಈ ರಸ್ತೆಯು ಕೆಸರು ನಿವಾರಿಸಬೇಕೆಂದು ಆದೇಶಿಸಿದ್ದಾರೆ.
ಬೆಳ್ಳಾರೆಯಿಂದ ಮುಡಾಯಿ ತೋಟದ ಕಡೆಗೆ ಹೋಗುವ ರಸ್ತೆ ಮಂಡೇಪು ಎಂಬಲ್ಲಿ ತೀರಾ ಕೆಸರುಮಯವಾಗಿತ್ತು. ಶಾಲೆ ಆರಂಭವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಇಬ್ಬರು ಮಕ್ಕಳು ಅವರ ಪೋಷಕರ ಜೊತೆ ಸೇರಿ ರಸ್ತೆಯ ಕೆಸರು ನಿವಾರಿಸುವ ಶ್ರಮದಾನದಲ್ಲಿ ಭಾಗಿಯಾಗಿದ್ದರು. ಮಕ್ಕಳ ಈ ಕಾರ್ಯ ಫೋಟೊ ಸಹಿತ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಿನ್ನೆ ರಾತ್ರಿಯೇ ಇದನ್ನು ಗಮನಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಳ್ಯ ತಾಪಂ ಇ.ಒ. ರವರಿಗೆ ಸೂಚನೆ ನೀಡಿದ ಮೇರೆಗೆ ತಾಪಂ ಇಒ ಬೆಳ್ಳಾರೆ ಗ್ರಾ ಪಂ ಪಿಡಿಒ ರವರಿಗೆ ದುರಸ್ತಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪಿಡಿಒ ಸ್ಥಳ ಪರಿಶೀಲನೆ ನಡೆಸಿದ್ದರು. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ರಸ್ತೆಯನ್ನು ಮಕ್ಕಳು ದುರಸ್ತಿ ಪಡಿಸುತ್ತಿರುವ ವರದಿಯನ್ನು ಗಮನಿಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರಾದ ಸೋಮಶೇಖರ್ ಅವರು, ಎಪಿಪಿ ಮತ್ತು ಬೆಳ್ಳಾರೆ ಎಸೈಯವರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದರು.
ರಸ್ತೆಯ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದುದಕ್ಕಾಗಿ ಪೋಷಕರನ್ನು ಪ್ರಶ್ನಿಸಿದ್ದು, ‘ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತಿಗೆ ಮನವಿ ನೀಡಿದ್ದರೂ, ಅವರು ಮಾಡದಿದ್ದ ಕಾರಣದಿಂದಾಗಿ ನಾವು ಶ್ರಮದಾನ ಮಾಡಿದೆವು. ಆ ವೇಳೆ ಮಕ್ಕಳು ಬಂದು ಶ್ರಮದಾನದಲ್ಲಿ ಭಾಗಿಯಾಗಿದರು’ ಎಂದು ಪೋಷಕರು ತಿಳಿಸಿದರು ಎನ್ನಲಾಗಿದೆ.
ಗ್ರಾಮ ಪಂಚಾಯತಿಗೆ ಬಂದ ನ್ಯಾಯಾಧೀಶರು ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ರವರನ್ನು ಪ್ರಶ್ನಿಸಿ ಆ ರಸ್ತೆಯನ್ನು ದುರಸ್ತಿಪಡಿಸದ ಬಗ್ಗೆ ಕೇಸು ದಾಖಲಿಸುವುದಾಗಿ ಹೇಳಿದರೆನ್ನಲಾಗಿದೆ. ಮಕ್ಕಳಿಗೆ ಹಾರೆ ನೀಡಿ ಕೆಲಸ ಮಾಡಿಸಿದ ಪೋಷಕರ ಮೇಲೆ, ರಸ್ತೆಯ ದುರಸ್ತಿ ಮಾಡಿಸದ ಪಂಚಾಯತ್ ಸದಸ್ಯ, ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಎಸ್ಸೈ ಯವರಿಗೆ ಸೂಚನೆ ನೀಡಿದರೆಂದೂ, ಆಗ ಎಸ್. ಐ.ಯವರು ” ಕೇಸ್ ಮಾಡೋದು ಬೇಡ. ರಸ್ತೆ ರಿಪೇರಿ ಮಾಡಿಸುವ ಕೆಲಸ ಮಾಡಿಸೋಣ” ಎಂದು ಹೇಳಿದಾಗ ಅದಕ್ಕೆ ಒಪ್ಪಿದ ನ್ಯಾಯಾಧೀಶರು ” ಇಂದು ಸಂಜೆಯೊಳಗೆ ಆ ರಸ್ತೆಯ ಕೆಸರು ನಿವಾರಿಸುವ ಕೆಲಸ ಮಾಡಿ ಅದರ ಫೋಟೋ ಸಹಿತ ವರದಿಯನ್ನು ನಮಗೆ ಸಲ್ಲಿಸಬೇಕು” ಎಂದು ಆದೇಶ ನೀಡಿದ್ದಾರೆ.