ಮಂಗಳೂರು: ಕಡಲತಡಿ ಮಂಗಳೂರಿನಲ್ಲೊಂದು ಹೀನಾತಿಹೀನ ಕೃತ್ಯ ನಡೆದಿದೆ. ಲೈಂಗಿಕ ಕಿರುಕುಳ ನೀಡಲು ಎರಡು ವರ್ಷದ ಹೆಣ್ಣು ಮಗುವನ್ನು ಕಿರಾತಕರು ಹೊತ್ತೊಯ್ದಿದ್ದಾರೆ. ನಿನ್ನೆ ಸಂಜೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ.
ಫಿಶ್ ಕಟ್ಟಿಂಗ್ ಮಾಡುವ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದಾರೆ. ಕಾರ್ಮಿಕರೆಲ್ಲರ ಮಕ್ಕಳನ್ನ ನೋಡಿಕೊಳ್ಳಲು ಒಂದು ಕ್ಯಾಂಪ್ ಇದೆ. ಆ ಶಿಬಿರದಿಂದ ಹೆಣ್ಣು ಮಗುವನ್ನು ಚಂದನ್ ಎಂಬ ಆರೋಪಿ ಹೊತ್ತೊಯ್ದಿದ್ದಾನೆ. ಲೈಂಗಿಕ ಕಿರುಕುಳ ನೀಡಿ ಮಗುವನ್ನು ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಡಿ ಹೋಗಿದ್ದಾನೆ.
ನಾಲ್ಕು ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಮಗು ಹೋರಾಡಿದೆ. ಫಿಶ್ ಕಟ್ಟಿಂಗ್ ಟ್ಯಾಂಕ್ ನಲ್ಲಿ ಮಗುವಿನ ಜೀವನ್ಮರಣ ಹೋರಾಟ ನಡೆಸುವಾಗ ಟ್ಯಾಂಕ್ ನಲ್ಲಿದ್ದ ಉಪ್ಪು ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಮಗು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾಳೆ. ವೆನ್ಲಾಕ್ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿದೆ.
ಪೊಲೀಸ್ ತನಿಖೆಯ ವೇಳೆ ಬಿಹಾರ ಮೂಲದ ವ್ಯಕ್ತಿಯೋರ್ವ ಮಗುವನ್ನು ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಆತ ಲೈಂಗಿಕ ದೌರ್ಜನ್ಯ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

























