ಮಂಗಳೂರು: ಕರಾವಳಿಯಾದ್ಯಂತ ಹೆಸರುವಾಸಿಯಾಗಿರುವ ‘ಐಡಿಯಲ್ ಐಸ್‌ಕ್ರೀಂ’ ಸಂಸ್ಥೆಯ ಸ್ಥಾಪಕ, ಉದ್ಯಮಿ ಎಸ್. ಪ್ರಭಾಕರ ಕಾಮತ್ (79) ಇಂದು ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು.
ಅ. 29ರಂದು ಬಿಜೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು.
ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ ಪ್ರಭಾಕರ ಕಾಮತ್ ಅವರು ವರ್ಷಪೂರ್ತಿ ಬೇಡಿಕೆಯ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದರು. ಐಡಿಯಲ್ ಐಸ್ ಕ್ರೀಂ ಪಾರ್ಲರ್ ಆರಂಭಿಸಿದ್ದು, ಅವರೇ ಸ್ವತಃ ವಿವಿಧ ನಮೂನೆಯ ಐಸ್ ಕ್ರೀಂ ಮನೆಯಲ್ಲಿ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್ಸ್ ಮನೆಮಾತಾಗಿದೆ.
ಪ್ರಭಾಕರ ಕಾಮತ್ ಅವರನ್ನು ಪ್ರೀತಿಯಿಂದ ಪಬ್ಬಾ ಮಾಮ್ ಎಂದೂ ಕರೆಯುತ್ತಿದ್ದು ಅದೇ ಹೆಸರಿನಲ್ಲಿ ಮಂಗಳೂರಿನಲ್ಲಿ ಐಸ್ ಕ್ರೀಂ ಪಾರ್ಲರ್ ಕೂಡಾ ಇದೆ. ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಪ್ರಭಾಕರ ಕಾಮತ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.



























