ಉಡುಪಿ: ದೀಪಾವಳಿ ಪ್ರಯುಕ್ತ ತುಡರ ಹಬ್ಬದ ಬೆಳಕು ತೋರಿಸಲು ಗದ್ದೆಗೆ ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಉಡುಪಿ ಕಾಪುವಿನಲ್ಲಿ ಶುಕ್ರವಾರ ನಡೆದಿದೆ.
ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಮೃತ ದುರ್ದೈವಿ. ಬಲೀಂದ್ರ ಪೂಜೆಯ ಪ್ರಯುಕ್ತ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಗದ್ದೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಅವರಿಗೆ ವಿಷ ಜಂತು ಕಡಿದಿತ್ತು.
ಮನೆಯವರು ತಕ್ಷಣ ಅವರನ್ನು ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಆತ, ಶುಕ್ರವಾರ ಸಂಜೆ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.