ಕಡಬ: ಅಪ್ರಾಪ್ತ ಬಾಲಕಿಯೋರ್ವಳು ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಾಲಕಿಯ ಸಂಬಂಧಿಕನೋರ್ವನನ್ನು ಪೋಕ್ಸೋ ಕಾಯ್ದೆಯಡಿ ಕಡಬ ಠಾಣಾ ಪೊಲೀಸರು ಬಂಧಿಸಿದ ಘಟನೆ ಕೋಡಿಂಬಾಳದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಪಾಜೋವು ಸಮೀಪದ ರಮೇಶ್ ಎನ್ನಲಾಗಿದೆ.
ರಮೇಶ್ ತನ್ನ ಸಂಬಂಧಿಕರಾಗಿರುವ ಅಪ್ರಾಪ್ತ ಬಾಲಕಿಯನ್ನು ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದೀಗ ಆಕೆ ಗರ್ಭವತಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ರಮೇಶನನ್ನು ಕಡಬ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
2020ರ ಏಪ್ರಿಲ್ ತಿಂಗಳಿನಿಂದ ಪಾಜೋವು ನಿವಾಸಿ ರಮೇಶ್ ಆಗಾಗ ಬಾಲಕಿಯ ಮನೆಗೆ ಬಂದು ಬಾಲಕಿಯ ಮೇಲೆ ಬಲತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದು ಈ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ಆರೋಪಿ ರಮೇಶ್ ಬಾಲಕಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವಿಚಾರವನ್ನು ಬಾಲಕಿ ಯಾರಿಗೂ ತಿಳಿಸಿರಲಿಲ್ಲ ಎಂದು ತಿಳಿದು ಬಂದಿದೆ. ಬಾಲಕಿ ಗರ್ಭವತಿಯಾದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದು ತಪಾಸಣೆಗಾಗಿ ತನ್ನ ಅಜ್ಜಿಯೊಂದಿಗೆ ಕಡಬ ಸಮುದಾಯ ಆಸ್ಪತ್ರೆಗೆ ಬಂದಿದ್ದು, ಈ ಸಂದರ್ಭದಲ್ಲಿ ಗರ್ಭಿಣಿಯಾಗಿರುವ ವಿಚಾರ ವೈದ್ಯರಿಂದ ತಿಳಿದ ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿ ಅಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ ಒಂದೂವರೆ ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿದೆ.
ಬಳಿಕ ಬಾಲಕಿ ಪಾಜೋವು ನಿವಾಸಿ ರಮೇಶ್ ವಿರುದ್ಧ ದೂರು ನೀಡಿದ್ದು, ಕಡಬ ಪೋಲಿಸರು ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.