ಪುತ್ತೂರು: 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಿ.ಇ.ಟಿ, ಜೆ.ಇ.ಇ ಮತ್ತು ನೀಟ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ನೀಟ್ ಪರೀಕ್ಷೆಯಲ್ಲಿ ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿದ ಸಿಂಚನಾಲಕ್ಷ್ಮಿ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 579 ನೇ ರ‍್ಯಾಂಕ್ ಗಳಿಸಿದ ಅಮೃತಾ ಭಟ್, ಇಂಜಿನಿಯರಿಂಗ್ ವಿಭಾಗದಲ್ಲಿ 677ನೇ ರ‍್ಯಾಂಕ್ ಗಳಿಸಿದ ಗಣೇಶ ಕೃಷ್ಣ, ಇಂಜಿನಿಯರಿಂಗ್ ವಿಭಾಗದಲ್ಲಿ 784ನೇ ರ‍್ಯಾಂಕ್ ಗಳಿಸಿದ ಚಿನ್ಮಯಿ ಕಳೆದ ವರ್ಷದ ತಮ್ಮ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಪರೀಕ್ಷೆಗಳಿಗೆ ಮುಂಚಿತವಾಗಿ ತಾವು ಮಾಡುತ್ತಿದ್ದ ತಯಾರಿ, ಓದುತ್ತಿದ್ದ ಪುಸ್ತಕಗಳು, ಮಾನಸಿಕ ಒತ್ತಡವನ್ನು ನಿಭಾಯಿಸಲು ಅನುಸರಿಸುತ್ತಿದ್ದ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಕಿರಿಯರಿಗೆ ಮಾಹಿತಿ ನೀಡಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆಗಳನ್ನು ಎದುರಿಸುವಾಗ ಬರುವ ಸವಾಲುಗಳು ಮತ್ತು ಅವುಗಳನ್ನು ನಿಭಾಯಿಸುವ ರೀತಿಯ ಬಗ್ಗೆ ಮಾಹಿತಿ ನೀಡಿ ಅನೇಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿ ಉತ್ತರ ನೀಡಿದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶಶಾಸ್ತ್ರೀ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.