ವಿಟ್ಲ: ಮನೆಯ ಸಂಸ್ಕೃತಿಯಲ್ಲಿಯೇ ಮಕ್ಕಳ ಸಂಸ್ಕಾರ ಅಡಗಿರುತ್ತದೆ, ಸಂಸ್ಕೃತಿ ಸಂಸ್ಕಾರಗಳು ಭಾರತದ ಪವಿತ್ರ ಸನಾತನತೆಯ ಅಡಿಗಲ್ಲು”. ಸನಾತನ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುವ ಬಾಲ ಗೋಕುಲ ಸಮಿತಿಗಳ ಚಟುವಟಿಕೆ ಚಿಗುರುವ ಮನಸ್ಸುಗಳಿಗೆ ಸಂಸ್ಕಾರ ವೆಂಬ ಪುಷ್ಟಿ ಕೊಡುವ ಪ್ರಯತ್ನ ಮಾಡುತ್ತಿದೆ. ಅಳಿಕೆ ಗ್ರಾಮದ ಎರುಂಬು ಶ್ರೀ ವಿಷ್ಣುಮೂರ್ತಿ (ಮಂಗಲ) ದೇವಸ್ಥಾನದ ಸಭಾಭವನ ದಲ್ಲಿ 9ನೇ ತರಗತಿಯೊಳಗಿನ ಸುಮಾರು 30 ವಿದ್ಯಾರ್ಥಿಗಳನ್ನೊಳಗೊಂಡ ಬಾಲಗೋಕುಲ ಸಮಿತಿಯ ಚಟುವಟಿಕೆಗಳ ಉದ್ಘಾಟನೆ ನ.21 ರಂದು ಜರಗಿತು.
ಶ್ರೀ ವಿಷ್ಣು ಮೂರ್ತಿ (ಮಂಗಳ ) ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮ ಅಚಿಂತ್ಯಳ ಸರಸ್ವತಿ ಸ್ತುತಿಯೊಂದಿಗೆ ಪ್ರಾರಂಭವಾಯಿತು.
ಗ್ರಾಮೀಣ ಪ್ರದೇಶದಲ್ಲಿ ಮನೆ- ಮನಗಳಲ್ಲಿ ಮೌಲ್ಯಗಳನ್ನು ತುಂಬುವ ಉತ್ತಮ ಕೆಲಸ ನಡೆಯಬೇಕಾಗಿದೆ ಎಂದು ಕಾರ್ಯಕ್ರಮದ ಆಯೋಜಕಿ ಪುಷ್ಪ ಪ್ರಾಸ್ತಾವಿಕವಾಗಿ ತಿಳಿಸಿದರು. ಸಂಸ್ಕಾರದ ಹುಟ್ಟು ಶ್ರೇಷ್ಠ ಜನ್ಮ ಪಡೆದ ಮಾನವನಲ್ಲಿ ನಡೆಯಬೇಕು ಇಲ್ಲವಾದರೆ ಪ್ರಾಣಿ ಸಮಾನನಾಗುತ್ತಾನೆ. ಬ್ರಾಹ್ಮೀ ಮುಹೂರ್ತದಿಂದ ನಿದ್ರಾವಸ್ಥೆಯವರೆಗೂ ಪ್ರತಿಯೋರ್ವನು ನಡೆಸುವ ಕ್ರಿಯೆಯಲ್ಲಿ ಸಂಸ್ಕಾರ ಹೊಂದಿಸಿಕೊಳ್ಳುವ ಸಾಧನೆಯಿಂದ ಮಾತ್ರ ಸನಾತನತೆಯು ಉಳಿಯುತ್ತದೆ ಎಂದು ಅತಿಥಿಗಳಾಗಿ ಭಾಗವಹಿಸಿದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ಅಳಿಕೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು ಪ್ರಸ್ತುತ ಸ್ಥಿತಿಗತಿಗೆ ಸೂಕ್ತ ಕಾರ್ಯಕ್ರಮ, ನಶಿಸುತ್ತಿರುವ ಮೌಲ್ಯ ಶಿಕ್ಷಣವು ಸೂಕ್ತ ನಡೆಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಹಿರಿಯರಾದ ರಾಮಚಂದ್ರ ಬಲ್ಲಾಳ್, ವರದರಾಜ್ ಹಾಗೂ ಹೆತ್ತವರ ಪರವಾಗಿ ಶಾಲಿನಿ ಶೆಟ್ಟಿ ಉಪಸ್ಥಿತರಿದ್ದರು. ಕುಮಾರಿ ಪೂಜಾ ಸ್ವಾಗತಿಸಿ, ವಂದನಾರ್ಪಣೆಗೈದರು.