ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿವೇಕಾನಂದ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಬಾಲ ಪ್ರತಿಭೆ ಕುಮಾರಿ ‘ಅನ್ವಿತಾ‘ ವಿಟ್ಲ ಇವರು ಬಾಲ್ಯದಿಂದಲೇ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಶಾಲಾ ಮಟ್ಟದಲ್ಲಿ, ವಲಯ ಮಟ್ಟದಲ್ಲಿ ಹಾಗೂ ಊರ ಪರವೂರುಗಳಲ್ಲಿ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಜನ ಮನಗಳಲ್ಲಿ ಗುರುತಿಸಿಕೊಂಡಿರುತ್ತಾರೆ.
ಅನ್ವಿತಾ ರವರು ತಮ್ಮ 10ನೇ ವಯಸ್ಸಿನಲ್ಲಿ ಗೀತಾ ಸಾರಡ್ಕ ಅವರಲ್ಲಿ ಸಂಗೀತ ತರಬೇತಿ ಪಡೆದಿರುತ್ತಾರೆ. ಜೊತೆಯಲ್ಲಿಯೇ ರಾಜೇಶ್ ವಿಟ್ಲ ಅವರಿಂದ ನೃತ್ಯ ತರಬೇತಿ ಆರಂಭಿಸಿದರು. ತದನಂತರದಲ್ಲಿ ಶೈನ್ ಆರ್ಕೆಸ್ಟ್ರಾ ತಂಡದಲ್ಲಿ ತಮ್ಮ ಗಾಯನವನ್ನು ಮುಂದುವರಿಸಿ ಹಲವಾರು ಕಡೆಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.
ಬಾಲ್ಯದಲ್ಲಿಯೇ ಕಲೆಯ ಜೊತೆಯಲ್ಲಿ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅನ್ವಿತಾ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿಯೂ ಭಾಗವಹಿಸಿರುತ್ತಾರೆ.
ವಲಯ ಮಟ್ಟದಲ್ಲಿ ವಾಲಿಬಾಲ್ ಹಾಗೂ ತ್ರೋ ಬಾಲ್ ಪಂದ್ಯಗಳಲ್ಲಿಯೂ ಬಹುಮಾನ ಗೆದ್ದಿರುತ್ತಾರೆ. ಶಾಲಾ ಜೀವನದಲ್ಲಿ ತನ್ನ 4ನೇ ವಯಸ್ಸಿನಲ್ಲಿಯೇ ಛದ್ಮವೇಷ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯ ಯಾನವನ್ನು ಆರಂಭಿಸಿದ ಇವರು 14ನೇ ವಯಸ್ಸಿನವರೆಗೆ ಪ್ರಥಮ ಬಹುಮಾನವನ್ನು ಬಿಟ್ಟುಕೊಟ್ಟಿಲ್ಲ, ಹನ್ನೆರಡನೇ ವಯಸ್ಸಿನಲ್ಲಿ ಸ್ಯಾಕ್ಸೋ ಫೋನ್ ಕಲಿಯುವ ಉತ್ಸಾಹವನ್ನು ತೋರಿಸಿದ ಅನ್ವಿತಾ ಡಾ. ದಾಮೋದರ ಇವರ ಬಳಿ ಶಿಷ್ಯೆಯಾಗಿ ಸೇರಿಕೊಂಡರು. ಅದ್ಭುತ ಪ್ರತಿಭೆಯಾದ ಅನ್ವಿತಾ ಕೇವಲ ಆರು ತಿಂಗಳ ಅವಧಿಯಲ್ಲಿ ಗುರುಗಳ ಪಟ್ಟ ಶಿಷ್ಯೆಯಾಗಿ ಹೊರಹೊಮ್ಮಿ, ಗುರುಗಳ ಸಮ್ಮತಿ ಹಾಗೂ ಆಶೀರ್ವಾದ ಪಡೆದ ಅನ್ವಿತಾ ಕಾರ್ಯಕ್ರಮ ನೀಡಲು ತಮ್ಮ ಪಯಣ ಆರಂಭಿಸಿದರು.
ನಮ್ಮ ಜನ ನಮ್ಮ ಹೆಮ್ಮೆ ಯೂಟ್ಯೂಬ್ ಚಾನೆಲ್ ನಲ್ಲಿ ಹಾಗೂ ವಿಟ್ಲ, ಸಕಲೇಶಪುರ, ಕಾಸರಗೋಡು, ಸುಳ್ಯ, ಮಡಿಕೇರಿ, ಮಂಚಿ, ಮಂಗಳೂರು, ಕೇಪು, ವಿಟ್ಲ, ಬಿ.ಸಿ. ರೋಡ್, ಕಲ್ಲಡ್ಕ, ಬಂಟ್ವಾಳ, ಮೂಡಬಿದ್ರೆ, ಮಂಜೇಶ್ವರ, ಆಕಾಶವಾಣಿ ಮಂಗಳೂರು, ಪಾಂಚಜನ್ಯ ರೇಡಿಯೋ ಪುತ್ತೂರು, ಇಷ್ಟೇ ಮಾತ್ರವಲ್ಲದೇ ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾರೆ. ಕಿರಿಯ ವಯಸ್ಸಿನಲ್ಲಿಯೇ ಕಲಾ ಮಾತೆಯ ಸೇವೆಯನ್ನು ಮಾಡುತ್ತಿರುವ ಅನ್ವಿತಾ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ತಾನೂ ಹುಟ್ಟಿ ಬೆಳೆದ ಊರಿಗೂ ಹೆಮ್ಮೆಯ ಗರಿಯನ್ನು ತೊಡಿಸಿದ್ದಾರೆ. ಹೀಗೆ ಇನ್ನಷ್ಟು ಕಲಾ ಸೇವೆಗೈಯುತ್ತ ‘ಅನ್ವಿತಾ’ ಮತ್ತಷ್ಟು ಉನ್ನತ ಮಟ್ಟಕ್ಕೇರಲಿ ಎಂಬುದು ನಮ್ಮ ಆಶಯ…