ಪುತ್ತೂರು : ಓರ್ವ ವ್ಯಕ್ತಿಯ ವ್ಯಕ್ತಿತ್ವವು ಪರಿಪೂರ್ಣವೆನಿಸಬೇಕಾದಲ್ಲಿ ಅದಕ್ಕೆ ಶಿಕ್ಷಣವೊಂದೇ ಮಾರ್ಗ ಎಂಬ ದೃಢವಾದ ಆಶಯದೊಂದಿಗೆ ನಮಗೆಲ್ಲರಿಗೂ ಪ್ರಾತ:ಸ್ಮರಣೀಯರಾದ ಮೊ| ಆ್ಯಂಟೊನಿ ಪತ್ರಾವೋರವರಿಂದ ಸ್ಥಾಪಿತಗೊಂಡ ಸಂತ ಫಿಲೋಮಿನಾ ಕಾಲೇಜು ಕಳೆದ 66 ವರ್ಷಗಳಿಂದ ಗ್ರಾಮೀಣ ಪ್ರದೇಶದ ಉನ್ನತ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. 1958ರಂದಲೂ ಕಾಲೇಜು ವಿವಿಧ ವಿಷಯಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿರುತ್ತದೆ. ಶಿಕ್ಷಣ ಸಂಸ್ಥೆಯ ಸಾಧನೆಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಶ್ರೇಣೀಕರಣ ಸಂಸ್ಥೆ(ನ್ಯಾಕ್)ನಿಂದ ಸತತವಾಗಿ ಮೂರು ಬಾರಿ ಎ ಗ್ರೇಡ್ ಮಾನ್ಯತೆ ದೊರೆತಿದೆ.
2023-24ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ISO 9001:2015 ಪ್ರಮಾಣೀಕರಣವನ್ನು ಸಹ ಪಡೆದುಕೊಂಡಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯಾದ ಸಂತ ಫಿಲೋಮಿನಾ ಕಾಲೇಜಿನ ಬೆಳವಣಿಗೆಯಲ್ಲಿ ಈ ಅಂತರಾಷ್ಟ್ರೀಯ ಮನ್ನಣೆಯು ಪ್ರಮುಖ ಮೈಲಿಗಲ್ಲಾಗಿದೆ. ಇದಲ್ಲದೆ ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (ಎಐಸಿಟಿಇ)ಇಂದ ಅನುಮೋದನೆ ದೊರಕಿದ್ದು ಪ್ರಸ್ತುತ ಶ್ಯಕ್ಷಣಿಕ ವರ್ಷದಿಂದ ಬಿಬಿಎ ಮತ್ತು ಬಿಸಿಎ ಕೋರ್ಸ್ಗಳು ಎಐಸಿಟಿಇ ಸಂಯೋಜಿತ ಪದವಿ ಕೋರ್ಸ್ಗಳಾಗಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು.
ಸ್ವಾಯತ್ತತೆ ಪಡೆಯುವ ಪ್ರಥಮ ಹಂತವಾಗಿ ಕಾಲೇಜಿನಿಂದ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿತ್ತು. ಯುಜಿಸಿಯ ಆದೇಶದ ಮೇಲೆ ಎಪ್ರಿಲ್ ತಿಂಗಳಲ್ಲಿ ಪ್ರೊ| ಪಿ ಎಲ್ ಧರ್ಮ ರವರ ನೇತೃತ್ವದ ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಅಧಿಕಾರಿಗಳನ್ನೊಳಗೊಂಡ ಸ್ಥಾಯಿ ಸಮಿತಿಯು ಕಾಲೇಜಿಗೆ ಭೇಟಿ ನೀಡಿ ಪರಿಶೋಧನೆ ನಡೆಸಿತ್ತು. ಅನಂತರ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬಹುದೆಂದು ಯುಜಿಸಿಗೆ ಶಿಫಾರಸು ಮಾಡಿತ್ತು. ಇದರಂತೆ ಯುಜಿಸಿಯಿಂದ ಅನುಮೋದನೆ ದೊರೆತಿತ್ತು. ಮಾತ್ರವಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನವನ್ನು ಅಂಗೀಕರಿಸಿ ಅನುಮೋದನೆಗಾಗಿ ಕರ್ನಾಟಕ ರಾಜ್ಯ ಸರಕಾರಕ್ಕೆ ಕಡತಗಳನ್ನು ರವಾನಿಸಲಾಗಿತ್ತು. ಸಂಸ್ಥೆಯ ಕಡತಗಳನ್ನು ಅಮೂಲಾಗ್ರವಾಗಿ ಪರಿಶೋಧಿಸಿದ ಬಳಿಕ ಇದೀಗ ಸರಕಾರದ ಅನುಮತಿಯ ಮೇರೆಗೆ ಮಂಗಳೂರು ವಿಶ್ವವಿದ್ಯಾನಿಲಯವು ಕಾಲೇಜಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಇದು ನಮಗೆಲ್ಲರಿಗೂ ಸಂತಸದ ವಿಚಾರ ಹಾಗೂ ಕಾಲೇಜಿಗೆ ಸಂಬಂಧಪಟ್ಟಹಾಗೆ ಐತಿಹಾಸಿಕ ಸಾಧನೆಯಾಗಿದೆ.
2024-25ನೇ ಶೈಕ್ಷಣಿಕ ವರ್ಷದಲ್ಲಿಯೇ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆತುದು ಅತೀವ ಸಂತಸ ತಂದಿದೆ,. ಮಾನ್ಯತೆ ಪಡೆಯುವ ಪ್ರಕ್ರಿಯೆಯು ಇಂದು ನಿನ್ನೆಯದಲ್ಲ ಇದು ಹಲವಾರು ಜನರ ಶ್ರಮದ ಫಲ. ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಆಡಳಿತ ಚುಕ್ಕಾಣಿ ಹಿಡಿದ ಪರಮ ಪೂಜ್ಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾರವರ ಮಾರ್ಗದರ್ಶನ, ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರ ಮುಂದಾಳುತ್ವ, ಶಿಕ್ಷಕ ಮತ್ತು ಆಡಳಿತ ಸಿಬ್ಬಂದಿಗಳ ಪರಿಶ್ರಮದಿಂದಾಗಿ ನಮ್ಮ ಬಹುದಿನಗಳ ಕನಸು ಇಂದು ನನಸಾಗಿದೆ. ಸರಕಾರದ ಆದೇಶದ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಅನುಮತಿಯನ್ನು ಇದೀಗ ಪಡೆಯಲಾಗಿದೆ. ಸ್ವಾಯತ್ತತೆಗಾಗಿ ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನೂ ನಡೆಸಲಾಗಿದೆ. ಸುಸಜ್ಜಿತ ಕಂಟ್ರೋಲ್ ರೂಮ್, ಬೋರ್ಡ್ ರೂಮ್ ಹಾಗೂ ಇನ್ನಿತರ ಭೌತಿಕ ಸೌಲಭ್ಯಗಳು, ಪರೀಕ್ಷಾಂಗ ಮುಂತಾದ ವಿಭಾಗಗಳು ಶೀಘ್ರದಲ್ಲಿಯೇ ಕಾರ್ಯ ನಿರ್ವಹಿಸಲು ಸನ್ನದ್ಧವಾಗಿವೆ. ಶಿಕ್ಷಣ ಮಂಡಳಿ, ಪ್ರತಿ ವಿಭಾಗದ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಗಳು ಕಾರ್ಯ ನಿರ್ವಹಿಸಲಿವೆ. ಕಾಲೇಜಿನಲ್ಲಿ ಪದವಿ ವಿಭಾಗದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಸಿಎ (ಎಐ & ಎಂಎಲ್) ಕೋರ್ಸ್ಗಳನ್ನು ನೀಡಲಾಗುತ್ತಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂಎಸ್ ಡಬ್ಲ್ಯೂ, ಎಂಕಾಂ, ಹಾಗೂ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಕೋರ್ಸ್ ಗಳನ್ನು ನೀಡಲಾಗುತ್ತಿದ್ದು ಈ ಶೈಕ್ಷಣೆಕ ವರ್ಷದಿಂದ ಎಂಸಿಎ ಕೋರ್ಸ್ಅನ್ನು ಪ್ರಾರಂಭಿಸಲಾಗುವುದು. ಬಿಬಿಎ, ಬಿಸಿಎ ಹಾಗೂ ಎಂಸಿಎ ಕೋರ್ಸ್ಗಳಿಗೆ ಎಐಸಿಟಿಇ ಮಾನ್ಯತೆ ದೊರಕಿದೆ. ಕಾಲೇಜಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮೊಂದಿಗೆ ಕೈ ಜೋಡಿಸುತ್ತಿರುವ ನಮ್ಮ ಹೆಮ್ಮೆಯ ವಿದ್ಯಾರ್ಥಿವೃಂದ, ಶಿಕ್ಷಕ ರಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿಸಂಘಗಳ ಸಹಕಾರವನ್ನು ಮರೆಯುವಂತಿಲ್ಲ. ಇದಲ್ಲದೆ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ , ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (KITS), ನಮ್ಮ ಸಂಸ್ಥೆಯನ್ನು NAIN ಅತಿಥೇಯ ಸಂಸ್ಥೆಯಾಗಿ ಆಯ್ಕೆ ಮಾಡಿದೆ (NHI)’ ಕರ್ನಾಟಕ ಸ್ಟಾರ್ಟ್ಅಪ್ ನೀತಿಯ ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್ (NAIN) 2.0 ಕ್ರಿಯಾಶೀಲ ಯುವಕಯುವತಿಯರಿಗೆ ನಾವೀನ್ಯತೆ ಮತ್ತು ಉದ್ಯಮಶೀಲತೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳನ್ನು ಯುವ ಉದ್ಯಮಿಗಳಾಗಿಸುವಲ್ಲಿ ದಾರಿದೀಪವಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ಉತ್ಸಾಹಿ ವಿದ್ಯಾರ್ಥಿಗಳ ತಂಡಗಳು ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಿ ಪ್ರೊಟೊಟೈಪ್ ಅಥವಾ ಮಾದರಿಗಳನ್ನು ನಿರ್ಮಿಸುವಲ್ಲಿ ಕಾರ್ಯತತ್ಪರಗೊಳ್ಳಲಿವೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲು ಕಾಲೇಜಿನಲ್ಲಿ 60ಕ್ಕೂ ಹೆಚ್ಚಿನ ಕ್ರಿಯಾತ್ಮಕ ಘಟಕಗಳಿವೆ. ನಮ್ಮ ಕಾಲೇಜಿನಲ್ಲಿ ಐಸಿಟಿ ಅಕಾಡೆಮಿಯೊಂದಿಗೆ ಒಡಂಬಡಿಕೆಯ ಸಹಾಯದಿಂದ ಸೈಬರ್ ಸೆಕ್ಯುರಿಟಿ ಮುಂತಾದ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ಗಳನ್ನು ನೀಡಲಾಗುತ್ತಿದೆ. ತೀವ್ರ ಪೈಪೋಟಿಯಿರುವ ಈ ಕಾಲಘಟ್ಟದಲ್ಲಿ ನಮ್ಮ ಕಾಲೇಜಿನ ಕ್ರೀಡಾಪಟುಗಳ ಸಾಧನೆಯು ಉತ್ತಮವಾಗಿದೆ. ಅವರಿಗೆ ನುರಿತ ತರಬೇತುದಾರರಿಂದ ಮಾರ್ಗದರ್ಶನ ನೀಡಲಾಗುತ್ತಿದೆ.
ಗತವರ್ಷಗಳ ಸಾಧನೆಯನ್ನೇ ಹೇಳಿಕೊಂಡು ಓಡಾಡುವಂತಿಲ್ಲ ಎಂಬ ಅರಿವು ನಮಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಲ್ಲಿ ಈ ಸ್ವಾಯತ್ತ ಸ್ಥಾನಮಾನ ಹಾಗೂ ಕಾಲೇಜಿನ ಉಳಿದೆಲ್ಲಾ ಬೆಳವಣಿಗೆಗಳು ನಮಗೆ ಸ್ಪೂರ್ತಿ ನೀಡಿವೆ. ಸ್ವಾಯತ್ತ ಸಂಸ್ಥೆಯಾಗಿ ನಮ್ಮ ಕಾಲೇಜಿಗೆ ಸ್ವಂತ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು ಹೊಸ ಕೋರ್ಸ್ಗಳನ್ನು ಪರಿಚಯಿಸಲು ಮತ್ತು ಸ್ವತಂತ್ರವಾಗಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯು ದೊರಕಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಂಶೋಧನೆಯನ್ನು ಪೋಷಿಸಿ ಶೈಕ್ಷಣಿಕ ಉತ್ಕೃಷ್ಟತೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಹೇಳಲು ಅತ್ಯಂತ ಸಂತಸವಾಗುತ್ತಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಸಂಚಾಲಕರಾದ ಲಾರೆನ್ಸ್ ಮಸ್ಕರೇನಸ್, ಪ್ರಾಚಾರ್ಯರಾದ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಉಪಸ್ಥಿತರಿದ್ದರು.