ಪುತ್ತೂರು: ರಸ್ತೆಗೆ ಮಣ್ಣು ಹಾಕಿ ಸಂಚಾರಕ್ಕೆ ತೊಡಕು ಉಂಟಾಗಿರುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಪರಸ್ಪರ ಹಲ್ಲೆ ನಡೆದಿರುವ ಘಟನೆ ಜೂ.14ರಂದು ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಇತ್ತಂಡದ ಮೂವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕಬಕ ವಿದ್ಯಾಪುರ ದಿ.ನಟರಾಜ ಅವರ ಪತ್ನಿ ರಾಣಿ(60ವ.) ಹಾಗೂ ಅವರ ಪುತ್ರ ಶಿವಕುಮಾರ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನಾನು ಟೈಲ್ಸ್ ಕೆಲಸ ಮಾಡುತ್ತಿದ್ದು ಕಬಕದ ವಿದ್ಯಾಪುರದಲ್ಲಿ ನೆರೆ ಮನೆಯವರೊಂದಿಗೆ ಪರಸ್ಪರ ಅನ್ನೋನ್ಯವಾಗಿ ವಾಸಿಸುತ್ತಿದ್ದೇವೆ. ನೆರೆಮನೆಯವರು ಮನೆ ನಿರ್ಮಿಸುವ ಸಂದರ್ಭದಲ್ಲಿ ಮಣ್ಣು ತಂದು ರಸ್ತೆಗೆ ಹಾಕಿದ್ದರು. ಇದು ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಸರುಮಯಗೊಂಡಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇವು. ಆದರೂ ಅವರು ಮತ್ತೆ ಮಣ್ಣು ರಸ್ತೆಗೆ ಹಾಕಿದ್ದು ಇದರಿಂದಾಗಿ ಸಂಚಾರಕ್ಕೆ ತೀರಾ ಸಮಸ್ಯೆ ಉಂಟಾಗಿತ್ತು.
ಇದರ ಬಗ್ಗೆ ಜೂ.14ರಂದು ಬೆಳಗ್ಗೆ ರಸ್ತೆಗೆ ಮಣ್ಣು ಹಾಕಿರುವ ನೆರೆ ಮನೆಯವರಲ್ಲಿ ವಿಚಾರಿಸಿದ್ದೇವೆ. ಈ ಸಂದರ್ಭದಲ್ಲಿ ನೆರೆಮನೆಯ ರಿಯಾಝ್, ಇಲ್ಯಾಸ್, ಆಶಿಕ್ ಹಾಗೂ ಅದರ ತಾಯಿ ಹಾಜಿರಾ ಮೊದಲಾದವರು ಸೇರಿಕೊಂಡು ಉಡಾಪೆಯಿಂದ ಮಾತನಾಡಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅವರ ಪೈಕಿಯ ರಿಯಾಜ್ ನನ್ನ ತಾಯಿ ರಾಣಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಹೋದ ನನ್ನ ಮೇಲೂ ಅವರು ಹಲ್ಲೆ ನಡೆಸಿದ್ದಾರೆ ಎಂದು
ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿವಕುಮಾರ್ ಆರೋಪಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇನ್ನೊಂದು ತಂಡದ ಕಬಕ ವಿದ್ಯಾಪುರದ ಮೊಹಮ್ಮದ್ ಅವರ ಪುತ್ರ ಇಲ್ಯಾಸ್, ರಿಯಾಝ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಮತ್ತೊಬ್ಬನ್ಯಾಯವಾದಿಯಾಗಿರುವ ಆಶಿಕ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನಮ್ಮ ರಸ್ತೆಯು ಗುಂಡಿಗಳಿಂದ ತುಂಬಿತ್ತು. ಇದಕ್ಕೆ ಆರು ತಿಂಗಳ ಹಿಂದೆ ಮಣ್ಣು ಹಾಕಿ ರಸ್ತೆ ದುರಸ್ಥಿ ಮಾಡಿದ್ದೇವೆ. ಇದೀಗ ಸುರಿದ ಮಳೆಯಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದರ ಬಗ್ಗೆ ಕಬಕ ಗ್ರಾ.ಪಂ ಪಿಡಿಒ ಅವರಿಗೆ ತಿಳಿಸಿದ್ದು ಅವರು ಸರಿಪಡಿಸಿಕೊಡುವುದಾಗಿ ತಿಳಿಸಿದ್ದರು. ಇದೇ ವಿಚಾರದಲ್ಲಿ ನೆರೆ ಮನೆಯ ಶಿವಕುಮಾರ್ ಅವರ ತಾಯಿ ರಾಣಿ ಹಾಗೂ ಯಶೋಧ ಎಂಬವರು ಜೂ.14ರಂದು ನಮ್ಮ ಮನೆಗೆ ಬಂದು ಮಣ್ಣು ಹಾಕಿ ರಸ್ತೆ ಕೆಸರಾಗಿರುವುದನ್ನು ಸರಿಪಡಿಸಿಕೊಡುವಂತೆ ತಗಾದೆ ಎತ್ತಿದ್ದಾರೆ.
ಸದರಿ ರಸ್ತೆಯನ್ನು ಸರಿಪಡಿಸಿಕೊಡುವಂತೆ ಕಬಕ ಗ್ರಾ.ಪಂ ಪಿಡಿಒ ಅವರಿಗೆ ತಿಳಿಸಿದ್ದು ಅವರು ಸರಿಪಡಿಸಿಕೊಡುವುದಾಗಿ ತಿಳಿಸಿರುವುದಾಗಿ ಹೇಳಿದ್ದೇವೆ. ಪಂಚಾಯತ್ ನವರು ಯಾಕೆ ಸರಿಪಡಿಸಬೇಕು, ನೀವೇ ಸರಿಪಡಿಸಿಕೊಡಿ ಎಂದು ಹೇಳಿದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ನಮ್ಮ ತಾಯಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಇದನ್ನು ತಡೆಯಲು ಹೋದ ನಮ್ಮ ಮೂವರ ಮೇಲೂ ಅವರು ಟೈಲ್ಸ್, ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ತೀವ್ರ ಗಾಯಗೊಂಡಿರುವ ಸಹೋದರರಾದ ಇಲ್ಯಾಸ್ ಹಾಗೂ ರಿಯಾಝ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಆಶಿಕ್ ತಿಳಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಒಂದು ತಂಡದ ಶಿವಕುಮಾರ್ ಹಾಗೂ ಇನ್ನೊಂದು ತಂಡದ ಆಶಿಕ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಸಕ ಅಶೋಕ್‌ಕುಮಾರ್ ರೈ ಅವರು ಜೂ.14ರಂದು ಸಂಜೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು , ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮೊದಲಾದ ಮುಖಂಡರು ಶಿವಕುಮಾರ್ ಹಾಗೂ ಅವರ ತಾಯಿ ರಾಣಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿದ್ದಾರೆ.

























