ಪುತ್ತೂರು: ನೆಹರುನಗರದಿಂದ ವಿವೇಕಾನಂದ ಕಾಲೇಜು, ಬನ್ನೂರು–ಪಡೀಲ್ ಸಂಪರ್ಕ ರಸ್ತೆಯಲ್ಲಿರುವ ರೈಲ್ವೆ ಫ್ಲೈಓವರ್ ರಸ್ತೆಯ ದುರಸ್ತಿಗೆ ಸಂಬಂಧಿಸಿದಂತೆ ಸಂಸದ ಬ್ರಿಜೇಶ್ ಚೌಟ ಅವರ ಸೂಚನೆ ಮೇರೆಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
ಗುತ್ತಿಗೆದಾರರು, ರೈಲ್ವೆ ಇಲಾಖೆಯ ಅಧಿಕಾರಿಗಳಾದ ಪೂಲ್ಚಂದ್ರ ಹಾಗೂ ಪುತ್ತೂರು ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಸುಹಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿ, ದುರಸ್ತಿ ಕಾಮಗಾರಿ ಕೈಗೊಳ್ಳುವ ಕುರಿತು ತೀರ್ಮಾನಿಸಿದರು.
ಈ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾತನಾಡಿ, ಪ್ರಸ್ತುತ ಬೊಳುವಾರು –ಪಡೀಲ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ರಸ್ತೆ ಸಂಚಾರಕ್ಕೆ ಬಂದ್ ಆಗಿದೆ. ಇದರಿಂದ ಹೆಚ್ಚಿನ ವಾಹನಗಳು ನೆಹರುನಗರ–ಪಡೀಲ್ ರೈಲ್ವೆ ಫ್ಲೈಓವರ್ ರಸ್ತೆಯನ್ನು ಬಳಸುತ್ತಿರುವ ಕಾರಣ, ಈ ರಸ್ತೆಯನ್ನು ಈಗಲೇ ದುರಸ್ತಿಗೆ ಕೈಗೆತ್ತಿಕೊಂಡರೆ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ತಿಳಿಸಿದರು.
ರೈಲ್ವೆ ಫ್ಲೈಓವರ್ ರಸ್ತೆ ದುರಸ್ತಿಗೆ ಸುಮಾರು ಒಂದು ವಾರದ ಅವಧಿ ಬೇಕಾಗುವುದರಿಂದ, ಬೊಳುವಾರು –ಪಡೀಲ್ ರಸ್ತೆ ಕಾಮಗಾರಿ ಪೂರ್ಣಗೊಂಡ ತಕ್ಷಣ ನೆಹರುನಗರ–ಪಡೀಲ್ ರೈಲ್ವೆ ಫ್ಲೈಓವರ್ ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು ಎಂದು ಗುತ್ತಿಗೆದಾರರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ನಿತೇಶ್ ಕಲ್ಲೇಗ ಉಪಸ್ಥಿತರಿದ್ದರು.



























